ನವದೆಹಲಿ: ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಆಡಳಿತ ಅವಧಿಯ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೀರಿಸಿರುವ ಕಾರಣ ಎನ್ಡಿಎ ಕೂಟವು ಬುಧವಾರ ಸಭೆ ನಡೆಸಿ, ಅಭಿನಂದನಾ ನಿರ್ಣಯವನ್ನು ಅಂಗೀಕರಿಸಲು ಸಜ್ಜಾಗಿದೆ.
ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕೇಂದ್ರದಲ್ಲಿ 12 ವರ್ಷಗಳ ಆಡಳಿತ ಪೂರೈಸಿದ್ದು, 4399 ದಿನಗಳ ಕಾಲ ಪ್ರಧಾನಿಯಾಗಿ ಮೋದಿ ಅವರು ಕಾರ್ಯನಿರ್ವಹಿಸಿದ್ದಾರೆ.
ಈ ಮೂಲಕ ನೆಹರೂ ಅವರಿಗಿಂತ ಒಂದು ದಿನ ಹೆಚ್ಚಿಗೆ ಮೋದಿ ಅವರು ಆಡಳಿತದಲ್ಲಿ ಇದ್ದಂತಾಗಿದೆ. ಹೀಗಾಗಿ ಎನ್ಡಿಎ ಕೂಟದ 72-75 ನಾಯಕರ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಅಭಿನಂದನಾ ಪ್ರಸ್ತಾವವನ್ನು ಅಂಗೀಕರಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿಯ ಹಿರಿಯ ಸಚಿವರೊಬ್ಬರು ಹೇಳಿದ್ದಾರೆ.
ನೆಹರೂ ಅವರನ್ನು 1947ರಲ್ಲಿ ದೇಶದ ಪ್ರಧಾನಿಯಾಗಿ ನಾಮನಿರ್ದೇಶನ ಮಾಡಲಾಗಿತ್ತಾದರೂ ಅಂದಿನಿಂದ 1952ರವರೆಗಿನ ಅವರ ಅಧಿಕಾರದ ಅವಧಿಯನ್ನು ಬಿಜೆಪಿ ಪರಿಗಣಿಸಿಲ್ಲ. ಬದಲಿಗೆ 1952ರ ಮೇ 13ರಂದು ಚುನಾಯಿತ ಪ್ರಧಾನಿಯಾಗಿ ನೆಹರೂ ಅವರು ಅಧಿಕಾರ ವಹಿಸಿಕೊಂಡಾಗಿನಿಂದ 1964ರ ಮೇ 27ರವರೆಗಿನ ಅವರ ಅಧಿಕಾರವಧಿಯನ್ನು ಪರಿಗಣಿಸಿದೆ. ಇದರೊಂದಿಗೆ ಅವರು 4398 ದಿನಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದಂತಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.
ಇಂದಿರಾ ಗಾಂಧಿ ಅವರು 14 ವರ್ಷಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರಾದರೂ ನಿರಂತರವಾಗಿ ಅಧಿಕಾರದಲ್ಲಿ ಇರಲಿಲ್ಲ ಎಂದೂ ಸಚಿವ ಹೇಳಿದ್ದಾರೆ.

