HEALTH TIPS

ಇರಾನ್ - ಅಮೆರಿಕ ಶಾಂತಿ ಒಪ್ಪಂದ ಘೋಷಿಸಿದ ಡೊನಾಲ್ಡ್ ಟ್ರಂಪ್; ಒಪ್ಪಂದದಲ್ಲೇನಿದೆ?

 ಟೆಹ್ರಾನ್/ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನೊಂದಿಗಿನ ಶಾಂತಿ ಒಪ್ಪಂದ 'ಈಗ ಪೂರ್ಣಗೊಂಡಿದೆ' ಎಂದು ಘೋಷಿಸಿದ ಬೆನ್ನಲ್ಲೇ, ಇರಾನ್‌ ನ ಶತಕೋಟಿ ಡಾಲರ್‌ಗಳ ಸ್ಥಗಿತಗೊಂಡ ಆಸ್ತಿಗಳ ಬಿಡುಗಡೆ ವಿಚಾರದಲ್ಲಿ ಉಭಯ ದೇಶಗಳ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. 


ಟೆಹ್ರಾನ್‌ನ ಪರಮಾಣು ಕಾರ್ಯಕ್ರಮ, ಹಾರ್ಮುಝ್ ಜಲಸಂಧಿಯನ್ನು ಪುನಃ ತೆರೆಯುವುದು, ಅಮೆರಿಕದ ನೌಕಾ ದಿಗ್ಬಂಧನ ತೆರವು, ತೈಲ ನಿರ್ಬಂಧಗಳ ಮೇಲಿನ ವಿನಾಯಿತಿಗಳು ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡ ಕರಡು ಒಪ್ಪಂದದ ಕುರಿತು ಎರಡೂ ದೇಶಗಳ ನಡುವೆ ಮಾತುಕತೆ ನಡೆದಿದೆ. ತಿಳುವಳಿಕೆ ಪತ್ರಕ್ಕೆ (ಒಔU) ಒಪ್ಪಿಗೆ ದೊರೆತ ಬಳಿಕ 60 ದಿನಗಳ ಅವಧಿಯಲ್ಲಿ ಅಂತಿಮ ಶಾಂತಿ ಒಪ್ಪಂದದ ಕುರಿತು ಚರ್ಚೆ ನಡೆಸಲಾಗುವುದು ಎಂದು ಇರಾನಿನ ಹಿರಿಯ ಅಧಿಕಾರಿಯೊಬ್ಬರು ರಾಯಿಟರ್ಸ್‌ ಗೆ ತಿಳಿಸಿದ್ದಾರೆ.

ಕರಡು ಒಪ್ಪಂದದಲ್ಲಿ ಇರಾನ್‌ ನ ಸ್ಥಗಿತಗೊಂಡ ಹಣಕಾಸು - ಆಸ್ತಿಗಳ ಬಿಡುಗಡೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಇರಾನಿನ ಮೂಲಗಳು ಹೇಳಿವೆ. ಆದರೆ ಅಮೆರಿಕದ ಅಧಿಕಾರಿಗಳು ಈ ವಾದವನ್ನು ತಳ್ಳಿಹಾಕಿದ್ದಾರೆ.

ರಾಯಿಟರ್ಸ್ ಉಲ್ಲೇಖಿಸಿದ ಹಿರಿಯ ಇರಾನಿನ ಅಧಿಕಾರಿಯ ಪ್ರಕಾರ, ಕರಡು ಒಪ್ಪಂದದಲ್ಲಿ ಅಮೆರಿಕವು ಇರಾನ್‌ ನ 25 ಶತಕೋಟಿ ಡಾಲರ್‌ ಮೌಲ್ಯದ ಸ್ಥಗಿತಗೊಂಡ ಆಸ್ತಿಗಳನ್ನು ಬಿಡುಗಡೆ ಮಾಡಲಿದೆ. ನೇರ ಹಣ ವರ್ಗಾವಣೆ, ಪ್ರಾದೇಶಿಕ ರಾಷ್ಟ್ರಗಳ ಸಹಕಾರ ವ್ಯವಸ್ಥೆಗಳು ಹಾಗೂ ಹಣಕಾಸು ಸಾಲ ಮಾರ್ಗಗಳು ಇದರಲ್ಲಿ ಸೇರಿವೆ ಎಂದು ಅವರು ಹೇಳಿದ್ದಾರೆ.

ಇರಾನ್‌ನ ಮೆಹರ್ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು 14 ಅಂಶಗಳ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಇರಾನ್‌ ನ ಸ್ಥಗಿತಗೊಂಡ ಹಣಕಾಸು - ಆಸ್ತಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಅಮೆರಿಕದ ನೌಕಾ ದಿಗ್ಬಂಧನ ತೆರವು ಒಪ್ಪಂದದ ಮೊದಲ ಅಂಶವಾಗಿದ್ದು, ಪರಮಾಣು ಕಾರ್ಯಕ್ರಮದ ವಿಚಾರವನ್ನು ಎರಡನೇ ಹಂತದ ಮಾತುಕತೆಗಳಿಗೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಅಮೆರಿಕದ ಹಿರಿಯ ಅಧಿಕಾರಿಗಳು ಹಾಗೂ ಶ್ವೇತಭವನದ ಮೂಲಗಳನ್ನು ಉಲ್ಲೇಖಿಸಿದ ಆಕ್ಸಿಯಾಸ್ ವರದಿಯು, ಇರಾನ್‌ ನ ಸ್ಥಗಿತಗೊಂಡ ಆಸ್ತಿಗಳನ್ನು ಮುಂಚಿತವಾಗಿ ಬಿಡುಗಡೆ ಮಾಡುವ ಯಾವುದೇ ಒಪ್ಪಂದ ಇಲ್ಲ ಎಂದು ತಿಳಿಸಿದೆ.

ಇದು ಕಾರ್ಯನಿರ್ವಹಣೆ ಆಧಾರಿತ ಒಪ್ಪಂದ. ಇರಾನ್ ತನ್ನ ಬದ್ಧತೆಗಳನ್ನು ಜಾರಿಗೊಳಿಸುವ ಮೊದಲು ಯಾವುದೇ ಹಣ ಬಿಡುಗಡೆ ಆಗುವುದಿಲ್ಲ. 60 ದಿನಗಳ ಮಾತುಕತೆ ಅವಧಿ ಆರಂಭವಾಗುವ ಮೊದಲು ಇರಾನ್‌ ಗೆ ಬೇಷರತ್ತಾಗಿ ಹಣ ಸಿಗುವುದಿಲ್ಲ ಎನ್ನಲಾಗಿದೆ.

ಮೆಹರ್ ಸುದ್ದಿ ಸಂಸ್ಥೆ ಈ ಹಿಂದೆ ಪ್ರಕಟಿಸಿದ ವರದಿಯಲ್ಲಿ, ಅಂತಿಮ ಹಂತದ ಮಾತುಕತೆಗಳು ಆರಂಭವಾಗುವ ಮೊದಲು ಅಮೆರಿಕವು 12 ಶತಕೋಟಿ ಡಾಲರ್‌ ಮೌಲ್ಯದ ಸ್ಥಗಿತಗೊಂಡ ಆಸ್ತಿಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿತ್ತು. ಅಲ್ಲದೆ, ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಇರಾನ್‌ ಗೆ ಕನಿಷ್ಠ 300 ಶತಕೋಟಿ ಡಾಲರ್‌ ಮೌಲ್ಯದ ಪುನರ್ನಿರ್ಮಾಣ ಯೋಜನೆಗಳನ್ನು ಪ್ರಸ್ತಾಪಿಸಬೇಕಾಗುತ್ತದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜೂನ್ 19ಕ್ಕೆ ಸಹಿ

ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದಕ್ಕೆ ಒಪ್ಪಿಗೆ ದೊರೆತಿದ್ದು, ಜೂನ್ 19ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಲಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ.

'ತೀವ್ರ ಮಾತುಕತೆಗಳ ಬಳಿಕ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದಕ್ಕೆ ಒಪ್ಪಿಗೆ ದೊರೆತಿದೆ. ಲೆಬನಾನ್ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣ ಮತ್ತು ಶಾಶ್ವತವಾಗಿ ಕೊನೆಗೊಳಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ' ಎಂದು ಅವರು ಎಕ್ಸ್‌ನಲ್ಲಿ ಪ್ರಕಟಿಸಿದ್ದಾರೆ.

ಈ ಘೋಷಣೆಯನ್ನು ಬೆಂಬಲಿಸಿ ಟ್ರಂಪ್ ಕೂಡ ಪ್ರತಿಕ್ರಿಯಿಸಿದ್ದು, 'ಇರಾನ್ ಇಸ್ಲಾಮಿಕ್ ಗಣರಾಜ್ಯದೊಂದಿಗಿನ ಒಪ್ಪಂದ ಈಗ ಪೂರ್ಣಗೊಂಡಿದೆ' ಎಂದು ಹೇಳಿದ್ದಾರೆ.

ಜೊತೆಗೆ, 'ಹಾರ್ಮುಝ್ ಜಲಸಂಧಿಯನ್ನು ಜಾಗತಿಕ ಹಡಗು ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತಗೊಳಿಸಲು ಅನುಮತಿ ನೀಡಿದ್ದೇನೆ. ಅಮೆರಿಕದ ನೌಕಾ ದಿಗ್ಬಂಧನವನ್ನೂ ತಕ್ಷಣ ತೆರವುಗೊಳಿಸಲಾಗುವುದು. ವಿಶ್ವದ ಹಡಗುಗಳೇ, ನಿಮ್ಮ ಎಂಜಿನ್‌ಗಳನ್ನು ಪ್ರಾರಂಭಿಸಿ. ತೈಲ ಹರಿಯಲಿ' ಎಂದು ಘೋಷಿಸಿದ್ದಾರೆ.

ಲೆಬನಾನ್ ಸಂಘರ್ಷ

ಶಾಂತಿ ಘೋಷಣೆಗೆ ಕೆಲವೇ ಗಂಟೆಗಳ ಮೊದಲು ಇಸ್ರೇಲ್‌ ಬೈರುತ್‌ನ ಉಪನಗರಗಳಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುರಿಯಾಗಿಸಿ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಎಚ್ಚರಿಕೆ ನೀಡಿದ್ದರಿಂದ ಒಪ್ಪಂದದ ಭವಿಷ್ಯದ ಬಗ್ಗೆ ಅನಿಶ್ಚಿತತೆ ಉಂಟಾಗಿತ್ತು.

ಆದರೆ ನಂತರ ಒಪ್ಪಂದಕ್ಕೆ ರೂಪ ದೊರೆತಿದೆ ಎಂದು ಪಾಕಿಸ್ತಾನ ಘೋಷಿಸಿದೆ. 'ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರ ಕಂಡುಕೊಂಡಿದ್ದಕ್ಕಾಗಿ' ಅಮೆರಿಕ ಮತ್ತು ಇರಾನ್‌ಗೆ ಷರೀಫ್ ಅಭಿನಂದನೆ ಸಲ್ಲಿಸಿದ್ದಾರೆ. ಮಧ್ಯಸ್ಥಿಕೆ ಪ್ರಕ್ರಿಯೆಗೆ ಬೆಂಬಲ ನೀಡಿದ ಖತರ್, ಸೌದಿ ಅರೇಬಿಯಾ ಮತ್ತು ತುರ್ಕಿಯೇ ನಾಯಕರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.

ಲೆಬನಾನ್‌ನಲ್ಲಿನ ಸಂಘರ್ಷವನ್ನು ಒಳಗೊಂಡಿಲ್ಲದ ಯಾವುದೇ ಒಪ್ಪಂದವನ್ನು ಇರಾನ್ ಒಪ್ಪುವುದಿಲ್ಲ ಎಂದು ಟೆಹ್ರಾನ್ ಬಹಳ ಹಿಂದಿನಿಂದಲೂ ಹೇಳುತ್ತಾ ಬಂದಿದೆ. ಹೀಗಾಗಿ ಲೆಬನಾನ್ ಸೇರಿದಂತೆ ಎಲ್ಲ ರಂಗಗಳಲ್ಲಿನ ಮಿಲಿಟರಿ ಕಾರ್ಯಾಚರಣೆಗಳನ್ನು ಶಾಶ್ವತವಾಗಿ ಕೊನೆಗೊಳಿಸುವ ಅಂಶವನ್ನು ಒಪ್ಪಂದದಲ್ಲಿ ಸೇರಿಸಲಾಗಿದೆ.

60 ದಿನಗಳ ಮಾತುಕತೆ

ಈಗ ಪ್ರಕಟಗೊಂಡಿರುವುದು ಅಂತಿಮ ಶಾಂತಿ ಒಪ್ಪಂದವಲ್ಲ. ಇದು 60 ದಿನಗಳ ಮಾತುಕತೆ ಅವಧಿಯನ್ನು ರೂಪಿಸುವ ತಿಳುವಳಿಕೆ ಪತ್ರವಾಗಿದ್ದು, ಈ ಅವಧಿಯಲ್ಲಿ ಅಮೆರಿಕ ಮತ್ತು ಇರಾನ್ ಅಧಿಕಾರಿಗಳು ಸಮಗ್ರ ಶಾಂತಿ ಒಪ್ಪಂದದ ಕರಡು ರೂಪಿಸಲಿದ್ದಾರೆ.

ಇರಾನ್‌ ನ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ, ಈ ಒಪ್ಪಂದವು ಯುದ್ಧಕ್ಕೆ ತಕ್ಷಣದ ಅಂತ್ಯ ತರುತ್ತದೆ. ಅಂತಿಮ ಒಪ್ಪಂದಕ್ಕಾಗಿ ಮುಂದಿನ ಎರಡು ತಿಂಗಳೊಳಗೆ ಮಾತುಕತೆಗಳು ಆರಂಭವಾಗಲಿವೆ ಎಂದು ಹೇಳಿದ್ದಾರೆ.

ಫೆಬ್ರವರಿ ಅಂತ್ಯದಲ್ಲಿ ಅಮೆರಿಕ-ಇಸ್ರೇಲ್ ದಾಳಿಗಳೊಂದಿಗೆ ಆರಂಭವಾದ ಯುದ್ಧವು, ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವ ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಗೆ ತೀವ್ರ ಅಡ್ಡಿಪಡಿಸಿತ್ತು. ಇರಾನ್ ಹಡಗು ಸಂಚಾರವನ್ನು ನಿರ್ಬಂಧಿಸಿದರೆ, ಪ್ರತಿಯಾಗಿ ಅಮೆರಿಕ ಇರಾನ್ ಬಂದರುಗಳಿಗೆ ಸಾಗುವ ಹಡಗುಗಳ ಮೇಲೆ ನಿರ್ಬಂಧ ಹೇರಿತ್ತು.

ಈಗ ಹಾರ್ಮುಝ್ ಜಲಸಂಧಿಯನ್ನು ಪುನಃ ತೆರೆಯುವ ಹಾಗೂ ನೌಕಾ ದಿಗ್ಬಂಧನ ತೆರವುಗೊಳಿಸುವ ನಿರ್ಧಾರವು ಜಾಗತಿಕ ಇಂಧನ ಮಾರುಕಟ್ಟೆಗೆ ಮಹತ್ವದ ನಿರಾಳತೆಯನ್ನು ನೀಡುವ ಸಾಧ್ಯತೆ ಇದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries