ದುಬೈ: ಶಾಂತಿ ಮಾತುಕತೆಗಳು ಮುರಿದುಬಿದ್ದ ಹಿನ್ನೆಲೆ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕ ಗುರುವಾರ ಬೆಳಿಗ್ಗೆ ಇರಾನ್ ಮೇಲೆ ಮತ್ತೊಂದು ಸುತ್ತಿನ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಕದನ ವಿರಾಮಕ್ಕೆ ಒಪ್ಪಿಕೊಳ್ಳದಿದ್ದರೆ ಇರಾನ್ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ ಕೆಲವೇ ಗಂಟೆಗಳ ಬಳಿಕ ಈ ದಾಳಿ ನಡೆದಿದೆ.
ಇರಾನ್ನ ಮಿಲಿಟರಿ ಕಣ್ಗಾವಲು ವ್ಯವಸ್ಥೆ, ಸಂವಹನ ಕೇಂದ್ರಗಳು ಮತ್ತು ವಾಯು ರಕ್ಷಣಾ ನೆಲೆಗಳನ್ನು ಗುರಿಯಾಗಿಸಿಕೊಂಡು ಯಶಸ್ವಿಯಾಗಿ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಇರಾನ್ ರಾಜಧಾನಿ ಟೆಹರಾನ್ ಮತ್ತು ಬಂದರು ನಗರಿ ಬಂದರ್ ಅಬ್ಬಾಸ್ ಸೇರಿದಂತೆ ದಕ್ಷಿಣದ ಹಲವು ಭಾಗಗಳಲ್ಲಿ ಸ್ಫೋಟದ ಶಬ್ದ ಕೇಳಿಬಂದಿದೆ.
ಇರಾನ್ ಬಂದರುಗಳ ಮೇಲೆ ದಾಳಿ ನಡೆಸಿ, ಅಲ್ಲಿಂದ ತೈಲ ಸಾಗಿಸುತ್ತಿದ್ದ ಟ್ಯಾಂಕರ್ಗಳ ಮೇಲೆ ಗುಂಡು ಹಾರಿಸಲಾಗಿದೆ ಎಂದು ಅಮೆರಿಕ ತಿಳಿಸಿದೆ.
ಅಮೆರಿಕದ ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಎಚ್ಚರಿಸಿದೆ.

