ಚಂಡೀಗಢ: 'ರೈತರ ಅನುಕೂಲಕ್ಕಾಗಿ ಮೊಬೈಲ್ ಮೂಲಕವೇ ಮಣ್ಣಿನ ಆರೋಗ್ಯವನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುವ ಆಯಪ್ವೊಂದನ್ನು ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ' ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ಹೇಳಿದ್ದಾರೆ.
ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆಯೂ ಸಚಿವರು ಕರೆ ನೀಡಿದ್ದಾರೆ.
ಹರಿಯಾಣದ ರೇವಾರಿ ಜಿಲ್ಲೆಯ ಬಾವಲ್ನಲ್ಲಿ ಆಯೋಜಿಸಲಾಗಿದ್ದ 'ಖೇತ್ ಬಚಾವೋ ಅಭಿಯಾನ'ದ ಸಮಾರೋಪ ಸಮಾರಂಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಚೌಹಾಣ್, ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
'ಸರ್ಕಾರವು ಮೊಬೈಲ್ ಆಯಪ್ವೊಂದನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದ್ದು, ಅದರ ಮೂಲಕ ಮಣ್ಣಿನಲ್ಲಿ ಯಾವ ಪೋಷಕಾಂಶಗಳಿವೆ, ಎಷ್ಟು ಗೊಬ್ಬರವನ್ನು ಹಾಕಬೇಕು ಎಂಬುದನ್ನು ತಿಳಿಸುತ್ತದೆ. ನಿಮಗೆ(ರೈತರಿಗೆ) ಸಹಾಯವಾಗಲೆಂದು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ತಂತ್ರಜ್ಞಾನವನ್ನು ಬಳಸಿಕೊಂಡು, ಸರಿಯಾದ ಗೊಬ್ಬರಗಳನ್ನು ಬಳಸುವಂತೆ ನಾನು ನಿಮಗೆ ಮತ್ತೊಮ್ಮೆ ವಿನಂತಿಸುತ್ತೇನೆ' ಎಂದು ಹೇಳಿದ್ದಾರೆ.
'ರಸಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದಾಗಿ, ನಮ್ಮ ಮಣ್ಣಿನ ಆರೋಗ್ಯವು ಕ್ರಮೇಣ ಕ್ಷೀಣಿಸುತ್ತಿದೆ. ಸಾವಯವ ಕೃಷಿಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಫಸಲು ಕಡಿಮೆಯಾಗುವುದಿಲ್ಲ' ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ ಕೃಷಿ ವಲಯಕ್ಕೆ ಹರಿಯಾಣ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದ ಚೌಹಾಣ್, ಹರಿಯಾಣದಲ್ಲಿ 24 ಬೆಳೆಗಳಿಗೆ ಎಂಎಸ್ಪಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
'ಹರಿಯಾಣ ದೇಶದ ಅನ್ನದ ಬಟ್ಟಲನ್ನು ತುಂಬುತ್ತಿದೆ. ನಾವು ಅಮೆರಿಕದಿಂದ ಕೆಂಪು ಗೋಧಿಯನ್ನು ತರಬೇಕಾದ ಕಾಲವೊಂದಿತ್ತು. ಆದರೆ, ಇಂದು ಹರಿಯಾಣ ರೈತರ ಶ್ರಮದಿಂದ ದೇಶದ ಆಹಾರದ ದಾಸ್ತಾನು ತುಂಬಿದೆ' ಎಂದು ಹೇಳಿದ್ದಾರೆ.
'ಅಕ್ಕಿ ಉತ್ಪಾದನೆಯಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ವಿಶ್ವದಲ್ಲೇ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಕೃಷಿ ಕ್ರಾಂತಿಯಲ್ಲಿ ಹರಿಯಾಣದ ರೈತರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಒಂದು ತಿಂಗಳ ಕಾಲ ನಡೆದ 'ಖೇತ್ ಬಚಾವೋ ಅಭಿಯಾನ'ಕ್ಕೆ ಜೂನ್ 1 ರಂದು ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿತ್ತು.

