'ವಾಹನಗಳಿಗೆ ಶೇ 100ರಷ್ಟು ಎಥೆನಾಲ್ ಬಳಕೆಗೆ ನಿಯಮ ರೂಪಿಸುವ ಕಡತಕ್ಕೆ ಕಳೆದ ರಾತ್ರಿ 8 ಗಂಟೆ ಸುಮಾರಿಗೆ ನಾನು ಸಹಿ ಹಾಕಿ, ಕಾನೂನು ಪ್ರಕ್ರಿಯೆಗೆ ಕಳುಹಿಸಿದ್ದೇನೆ' ಎಂದು ಹೇಳಿದ್ದಾರೆ.
ಭಾರತದಲ್ಲಿ ಚಾಲನೆಯಲ್ಲಿರುವ ಬಹುತೇಕ ಕಾರುಗಳಲ್ಲಿ ಶೇ 85ರಷ್ಟು ಅಥವಾ ಶೇ 100ರಷ್ಟು ಎಥೆನಾಲ್ ಬಳಸುವ ತಂತ್ರಜ್ಞಾನ ಇಲ್ಲ. ಅಧಿಕ ಪ್ರಮಾಣದ ಗ್ಯಾಸೊಲಿನ್ ಮತ್ತು ಕಡಿಮೆ ಪ್ರಮಾಣದ ಎಥೆನಾಲ್ ಮಿಶ್ರಣ ಬಳಕೆಗೆ ಮಾತ್ರ ಅನುವು ಮಾಡಿಕೊಡುತ್ತವೆ. ಏಕೆಂದರೆ, ಈ ವಾಹನಗಳಲ್ಲಿ ಅಗತ್ಯ ಹಾರ್ಡ್ವೇರ್ ಮತ್ತು ಇಂಜಿನ್ ನಿಯತಾಂಕಗಳಿಲ್ಲ.
ಆದರೆ, ಇತ್ತೀಚೆಗೆ ಮಾರುತಿ ಸುಜುಕಿ, ಹೀರೊ ಮೊಟೊಕಾರ್ಪ್, ಟೊಯೊಟಾ, ಸುಜುಕಿ ಮತ್ತು ಹುಂಡೈ ಕಂಪನಿಗಳು ಅಧಿಕ ಪ್ರಮಾಣದಲ್ಲಿ ಅಥವಾ ಸಂಪೂರ್ಣ ಎಥೆನಾಲ್ ಬಳಸಿ ಓಡಿಸಬಲ್ಲ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.
ಎಥೆನಾಲ್ ನವೀಕರಿಸಬಹುದಾದ ಜೈವಿಕ ಇಂಧನವಾಗಿದ್ದು, ಪ್ರಾಥಮಿಕವಾಗಿ ಕಬ್ಬು, ಜೋಳ ಮತ್ತು ಇತರ ಕೃಷಿ ಕಚ್ಚಾ ವಸ್ತುಗಳ ಉಪಉತ್ಪನ್ನವಾಗಿದೆ. ಭಾರತದಲ್ಲಿ ಹೆಚ್ಚಿನ ಎಥೆನಾಲ್ ಅನ್ನು ಮೊಲಾಸಸ್ನಂತಹ ಕಬ್ಬಿನ ಆಧಾರಿತ ಉತ್ಪನ್ನಗಳಿಂದ ಉತ್ಪಾದಿಸಲಾಗುತ್ತದೆ.
ಎಥೆನಾಲ್ ಅನ್ನು ವಿವಿಧ ಪ್ರಮಾಣದಲ್ಲಿ ಪೆಟ್ರೋಲ್ನೊಂದಿಗೆ ಬೆರೆಸಬಹುದು ಅಥವಾ ವಿಶೇಷವಾಗಿ ವಿನ್ಯಾಸಗೊಳಿಸಲಾದ ಫ್ಲೆಕ್ಸ್-ಇಂಧನ ವಾಹನಗಳಲ್ಲಿ ಸಂಪೂರ್ಣ ಅದನ್ನೇ ಬಳಸಬಹುದು.
ಪೆಟ್ರೋಲ್ ಜೊತೆ ಎಥೆನಾಲ್ ಬಳಸಿ ವಾಹನ ಚಾಲನೆಯು ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಹೆಸರುವಾಸಿಯಾಗಿದೆ. ಆರಂಭಿಕವಾಗಿ ಶೇ 5 ಮತ್ತು 10ರಷ್ಟು, ಬಳಿಕ, ಶೇ 20ರಷ್ಟು ಎಥೆನಾಲ್ ಬಳಸುವ ಮೂಲಕ ಪ್ರಯೋಗ ನಡೆಸಲಾಗಿದೆ. ಹೀಗಾಗಿ, ಸರ್ಕಾರವು ನವೀಕರಿಸಬಹುದಾದದ ಇಂಧನ ಉತ್ಪಾದನೆಗೆ ಆದ್ಯತೆ ಹೆಚ್ಚಿಸಿದೆ.
ಬ್ರೆಜಿಲ್ ಮತ್ತು ಅಮೆರಿಕದ ಕೆಲ ಭಾಗಗಳಲ್ಲಿ ಶೇ 85ರಷ್ಟು ಎಥೆನಾಲ್ ಬಳಕೆಯ ವಾಹನಗಳನ್ನು ಬಳಸಲಾಗುತ್ತಿದೆ.
ದೇಶದಲ್ಲಿ ನವೀಕರಿಸಬಹುದಾದ ಇಂಧನದ ಉತ್ಪಾದನೆ ಹೆಚ್ಚಿಸುವ ಮೂಲಕ ಕ್ರಮೇಣ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವಲಬನೆಯನ್ನು ತಪ್ಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.
ವಿವಿಧ ಕಂಪನಿಗಳು ದ್ವಿಚಕ್ರ ವಾಹನ ಸೇರಿದಂತೆ ಶೇ 100ರಷ್ಟು ಎಥೆನಾಲ್ ಬಳಸುವ ವಾಹನಗಳ ಉತ್ಪಾದನೆಯತ್ತ ಶೀಘ್ರ ಚಿತ್ತ ಹರಿಸಲಿವೆ ಎಂದಿದ್ದಾರೆ.

