ಮಧ್ಯಪ್ರದೇಶ: ಭೋಗಿಗೆ ಬೆಂಕಿ ತಗುಲಿದೆ ಎಂಬ ಸುಳ್ಳು ವದಂತಿಯಿಂದ ಗಾಬರಿಯಾಗಿ ರೈಲಿನಿಂದ ಕೆಳಗೆ ಬಿದ್ದು, ಪಕ್ಕದ ಹಳಿಯ ಮೇಲೆ ಓಡುತ್ತಿದ್ದ ಪ್ರಯಾಣಿಕರ ಮೇಲೆ ಇನ್ನೊಂದು ರೈಲೊಂದು ಹರಿದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಬಳಿ ಭಾನುವಾರ (ಜೂನ್ 14) ಸಂಜೆ ಸಂಭವಿಸಿದೆ.
ಅಲ್ಲಿ ನಡೆದಿದ್ದೇನು?
ಭಾನುವಾರ ಸಂಜೆ 4:15ರ ಸುಮಾರಿಗೆ ಖಜುರಾಹೊ-ಉದಯಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಎಂದಿನಂತೆ ಸಾಗುತ್ತಿತ್ತು. ಝಾನ್ಸಿ ವಿಭಾಗದ ಹೇತಾಂಪುರ್ ಮತ್ತು ಧೋಲ್‌ಪುರ ನಿಲ್ದಾಣಗಳ ಮಧ್ಯೆ ಬರುತ್ತಿದ್ದಂತೆ ದೊಡ್ಡ ಹೈಡ್ರಾಮಾ ನಡೆದಿದೆ. ಸಾಮಾನ್ಯ ಬೋಗಿಯಲ್ಲಿದ್ದ ಯಾರೋ ಒಬ್ಬ ಪ್ರಯಾಣಿಕ ಇದ್ದಕ್ಕಿದ್ದಂತೆ ತುರ್ತು ಸರಪಳಿಯನ್ನು (Alarm Chain) ಜಗ್ಗಿದ್ದಾನೆ. ಅಷ್ಟರಲ್ಲೇ ಬೋಗಿಯ ಒಳಗಿದ್ದ ಯಾರೋ ಒಬ್ಬರು ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿದೆ! ಓಡಿ.. ಓಡಿ.. ಎಂದು ಜೋರಾಗಿ ಕಿರುಚಿದ್ದಾರೆ. ಈ ಒಂದು ಕೂಗು ಇಡೀ ರೈಲಿನಲ್ಲಿದ್ದವರ ಎದೆಬಡಿತವನ್ನು ಹೆಚ್ಚು ಮಾಡಿದೆ.
ಜೀವ ಉಳಿಸಿಕೊಳ್ಳುವ ಆತುರ
ರೈಲಿಗೆ ಬೆಂಕಿ ಬಿದ್ದಿದೆ ಎಂದು ನಂಬಿದ ಪ್ರಯಾಣಿಕರು, ಪ್ರಾಣ ಉಳಿಸಿಕೊಳ್ಳಲು ಬೋಗಿಯ ಬಾಗಿಲುಗಳಿಂದ ಒಬ್ಬರ ಮೇಲೊಬ್ಬರು ಮುಗಿಬಿದ್ದು ಕೆಳಗೆ ಜಿಗಿದಿದ್ದಾರೆ. ಗಂಡ, ಹೆಂಡತಿ, ಮಕ್ಕಳು ಎನ್ನದೆ ಸಿಕ್ಕ ಸಿಕ್ಕ ಕಡೆ ಓಡಲಾರಂಭಿಸಿದ್ದಾರೆ. ದುರದೃಷ್ಟವೆಂದರೆ, ಹಲವು ಪ್ರಯಾಣಿಕರು ಪಕ್ಕದಲ್ಲೇ ಇದ್ದ ಮತ್ತೊಂದು ಮೇನ್ ಲೈನ್ ಹಳಿಗೆ ಜಿಗಿದಿದ್ದಾರೆ.
ಅದೇ ಹೊತ್ತಿಗೆ ರಾಕ್ಷಸನಂತೆ ಎದುರಿನ ಅಪ್ ಲೈನ್‌ನಲ್ಲಿ ಫಿರೋಜ್‌ಪುರ್-ಸಿಯೋನಿ ಪಾಟಲ್‌ಕೋಟ್ ಎಕ್ಸ್‌ಪ್ರೆಸ್ ಅತ್ಯಂತ ವೇಗವಾಗಿ ಧಾವಿಸಿ ಬಂದಿದೆ. ಹಳಿಯ ಮೇಲೆ ಜನ ಓಡುತ್ತಿರುವುದನ್ನು ಕಂಡು ಲೋಕೋ ಪೈಲಟ್ ಬ್ರೇಕ್ ಹಾಕುವಷ್ಟರಲ್ಲಿ ಕಾಲ ಮಿಂಚಿಹೋಗಿದೆ. ಜೋರಾಗಿ ಬಂದ ಎಕ್ಸ್‌ಪ್ರೆಸ್ ರೈಲು ಹಳಿಯಲ್ಲಿದ್ದ ಜನರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಒಂದೇ ಕುಟುಂಬದ ಇಬ್ಬರು ಸೇರಿ ನಾಲ್ವರು ಸಾವು
ರೈಲು ಡಿಕ್ಕಿ ಹೊಡೆದ ರಭಸಕ್ಕೆ ದೇಹಗಳು ಹಳಿಯ ಮೇಲೆ ಛಿದ್ರಛಿದ್ರವಾಗಿ ಬಿದ್ದಿವೆ. ಮೃತರನ್ನು ಆಗ್ರಾ ನಿವಾಸಿಯಾದ ನದೀಮ್ ಖಾನ್ ಅವರ ಪತ್ನಿ ಅಫ್ರೀನ್ (35) ಮತ್ತು ಅವರ ನಾಲ್ಕು ವರ್ಷದ ಹೆಣ್ಣು ಮಗು ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಶಕುಂತಲಾ (60) ಮತ್ತು ರಾಜಸ್ಥಾನದ ಬಿಕಾನೇರ್ ಮೂಲದ ವೀರ್ಮ ದೇವಿ (60) ಎಂಬುವವರು ಇಂಜಿನ್ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಂಕಿಯ ವದಂತಿಯಿಂದ ಗಾಬರಿಯಾದ ಒಂದೇ ಕುಟುಂಬದ ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ರೈಲ್ವೆ ಆಡಳಿತ, ಆರ್‌ಪಿಎಫ್ (RPF), ಜಿಆರ್‌ಪಿ (GRP) ಮತ್ತು ಸ್ಥಳೀಯ ಪೊಲೀಸರು ಹಾಗೂ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ. ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ರಕ್ಷಣಾ ಕಾರ್ಯ ಮುಂದುವರಿದಿದೆ.
ಯಾರೋ ಕಿಡಿಗೇಡಿಗಳು ಎಳೆದ ಚೈನ್ ಪುಲ್ಲಿಂಗ್ ಹಾಗೂ ಬೆಂಕಿಯ ಸುಳ್ಳು ವದಂತಿಯೇ ಈ ದುರಂತಕ್ಕೆ ಕಾರಣವಾಗಿದ್ದು, ಸದ್ಯ ತನಿಖೆ ಆರಂಭಿಸಲಾಗಿದ್ದು, ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು ನೀಡಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

