ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಬುಧವಾರ (ಜೂನ್ 24) ಸರ್ಕಾರದ ವಿವಿಧ ಇಲಾಖೆಗಳಿಗೆ ಆಯ್ಕೆಯಾದ 401 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿದರು.
ಇಂಧನ ಇಲಾಖೆಯ ವತಿಯಿಂದ ಚೆನ್ನೈನ ಕಲೈವಾನರ್ ಅರಂಗಂನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಸಿಎಂ ವಿಜಯ್ ಅವರು ನೇಮಕಾತಿ ಪತ್ರಗಳನ್ನು ಅಭ್ಯರ್ಥಿಗಳಿಗೆ ಹಸ್ತಾಂತರಿಸಿದರು.
ಈ ವೇಳೆ ಮುಖ್ಯಮಂತ್ರಿ ವಿಜಯ್ ಅವರು ತೋರಿದ ಮಾನವೀಯ ನಡೆ ಎಲ್ಲರ ಗಮನ ಸೆಳೆಯಿತು. ತುಂಬು ಗರ್ಭಿಣಿಯಾಗಿದ್ದ ಆರ್ ಆಕ್ಷಯಲಕ್ಷ್ಮಿ ಎಂಬ ಅಭ್ಯರ್ಥಿ ನೇಮಕಾತಿ ಪತ್ರ ಪಡೆಯಲು ಬಂದಿರುವುದನ್ನು ಗಮನಿಸಿದ ಸಿಎಂ, ಸ್ವತಃ ತಾವೇ ವೇದಿಕೆಯಿಂದ ಕೆಳಗಿಳಿದು ಬಂದು ಆಕೆಗೆ ವೈಯಕ್ತಿಕವಾಗಿ ಆದೇಶ ಪತ್ರವನ್ನು ಹಸ್ತಾಂತರಿಸಿ ಶುಭ ಹಾರೈಸಿದರು.
ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಹಾಗೂ ತಮಿಳುನಾಡಿನಾದ್ಯಂತ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುವ ಉದ್ದೇಶದಿಂದ ವರ್ಷದೊಳಗೆ ಕನಿಷ್ಠ 15,000 ಹುದ್ದೆಗಳನ್ನು ಭರ್ತಿ ಮಾಡಲು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

