HEALTH TIPS

ಯಾವ ದಾಖಲೆ ಪೌರತ್ವವನ್ನು ಸಾಬೀತುಪಡಿಸುತ್ತದೆ? : ಕೇಂದ್ರ ಸರಕಾರದ ವಿರುದ್ಧ ಪ್ರತಿಪಕ್ಷಗಳಿಂದ ವಾಗ್ದಾಳಿ

ನವದೆಹಲಿ: ಪಾಸ್‌ಪೋರ್ಟ್ ಪೌರತ್ವಕ್ಕೆ ಪುರಾವೆಯಲ್ಲ ಎಂಬ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸ್ಪಷ್ಟೀಕರಣ ನೀಡಿದ ಬೆನ್ನಿಗೇ, ವಿರೋಧ ಪಕ್ಷದ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾಸ್‌ಪೋರ್ಟ್‌ಗಳನ್ನು ಭಾರತೀಯ ನಾಗರಿಕರಲ್ಲದೆ ಬೇರೆಯವರಿಗೆ ನೀಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.

ಮಂಗಳವಾರ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಹಾಗಿದ್ದರೆ ಯಾವ ದಾಖಲೆಯು ಪೌರತ್ವವನ್ನು ಸಾಬೀತುಪಡಿಸುತ್ತದೆ ಎಂದು ಪ್ರಶ್ನಿಸಿದ್ದಾರೆ. ''ವಿದೇಶಾಂಗ ಸಚಿವಾಲಯ ಜೂನ್ 24ರಂದು ಹೇಳಿಕೆಯೊಂದನ್ನು ನೀಡಿ, 'ಪಾಸ್‌ಪೋರ್ಟ್ ಒಂದು ಪ್ರಯಾಣ ದಾಖಲೆಯಾಗಿದೆ, ಪೌರತ್ವದ ದಾಖಲೆಯಲ್ಲ' ಎಂದು ಹೇಳಿದೆ. ಹಾಗಾದರೆ ಪೌರತ್ವಕ್ಕೆ ಪುರಾವೆಯಾಗುವ ದಾಖಲೆ ಯಾವುದು?'' ಎಂದು ಸಿಬಲ್ ತನ್ನ ಎಕ್ಸ್ ಸಂದೇಶದಲ್ಲಿ ಪ್ರಶ್ನಿಸಿದ್ದಾರೆ.

ಒಂದು ವೇಳೆ ಚುನಾವಣಾ ಆಯೋಗದ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ನನ್ನ ಪೌರತ್ವವನ್ನು ಶಂಕಿಸಿದರೆ, ನಾನು ಮತದಾನದ ಹಕ್ಕಿನಿಂದ ವಂಚಿತನಾಗಬಹುದು ಎಂಬ ಭೀತಿಯನ್ನು ಸಿಬಲ್ ವ್ಯಕ್ತಪಡಿಸಿದ್ದಾರೆ. ''ಬಿಎಲ್‌ಒ ನನ್ನ ಪೌರತ್ವವನ್ನು ಶಂಕಿಸಬಹುದು. ನನ್ನ ಮತದಾನದ ಹಕ್ಕನ್ನು ಕಸಿದುಕೊಳ್ಳಬಹುದು. ಫಲಿತಾಂಶ - ಬಿಜೆಪಿ ಚುನಾವಣೆಯಲ್ಲಿ ಗೆಲ್ಲುತ್ತದೆ. ಈಗ ವಿಷಯ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ!'' ಎಂದು ಸಿಬಲ್ ತನ್ನ ಸಂದೇಶದಲ್ಲಿ ಹೇಳಿದ್ದಾರೆ.

ವಿದೇಶಾಂಗ ಸಚಿವಾಲಯದ ಹೇಳಿಕೆಯನ್ನು ಹಾಸ್ಯಾಸ್ಪದ ಎಂದು ಕರೆದಿರುವ ಶಿವಸೇನಾ (ಯುಬಿಟಿ) ಸಂಸದ ಆದಿತ್ಯ ಠಾಕ್ರೆ, ಪಾಸ್‌ಪೋರ್ಟ್ ನೀಡುವ ಮೊದಲು ನಡೆಸುವ ಪರಿಶೀಲನೆಯನ್ನು ಪ್ರಶ್ನಿಸಿದ್ದಾರೆ ಹಾಗೂ ಈ ದಾಖಲೆಯನ್ನು ಭಾರತೀಯರಲ್ಲದವರಿಗೂ ನೀಡಲಾಗುತ್ತದೆಯೇ ಎಂದು ಕೇಳಿದ್ದಾರೆ.

''ಪಾಸ್‌ಪೋರ್ಟ್ ಪೌರತ್ವದ ದಾಖಲೆಯಲ್ಲ ಎಂದು ವಿದೇಶಾಂಗ ಸಚಿವಾಲಯ ನಂಬುವುದಾದರೆ: 1) ಪಾಸ್‌ಪೋರ್ಟ್ ನೀಡುವ ಮುನ್ನ ಪೊಲೀಸರು ಏನನ್ನು ಪರಿಶೀಲಿಸುತ್ತಾರೆ? 2) ನಮ್ಮ ದೇಶವು ಭಾರತೀಯರಲ್ಲದವರಿಗೂ ಪ್ರಯಾಣದ ದಾಖಲೆಯಾಗಿ ಪಾಸ್‌ಪೋರ್ಟ್‌ಗಳನ್ನು ನೀಡುತ್ತದೆಯೇ?'' ಎಂದು ಠಾಕ್ರೆ ಎಕ್ಸ್‌ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಪ್ರಶ್ನಿಸಿದ್ದಾರೆ.

ಬಿಜೆಪಿ ಮತದಾರರಾಗಿರುವುದು ಮಾತ್ರ ಅರ್ಹತೆಯೇ?

ಸರಕಾರದ ಹೇಳಿಕೆಯ ಬಗ್ಗೆ ವ್ಯಂಗ್ಯವಾಡಿದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ''ಇಂದು ಭಾರತೀಯ ಪೌರತ್ವಕ್ಕೆ ಇರುವ ಏಕೈಕ ಅರ್ಹತೆಯೆಂದರೆ ಹಿಂದೂ ಮತ್ತು ಬಿಜೆಪಿ ಮತದಾರರಾಗಿರುವುದು ಮಾತ್ರ ಎಂದು ತೋರುತ್ತದೆ. ಬೇರೇನೂ ಆಗುವುದಿಲ್ಲ'' ಎಂದು ಹೇಳಿದ್ದಾರೆ.

ವೋಟರ್ ಐಡಿ ತೋರಿಸಲು ಮಾತ್ರ, ಮತ ಚಲಾಯಿಸಲು ಅಲ್ಲ....

ಕಾಂಗ್ರೆಸ್‌ನ ಕೇರಳ ಘಟಕವು ಪೌರತ್ವ ದಾಖಲೆ ಕುರಿತಂತೆ ವಿಡಂಬನಾತ್ಮಕ ಸಂದೇಶವೊಂದನ್ನು ಎಕ್ಸ್‌ನಲ್ಲಿ ಹಾಕಿದೆ.

''ಆಧಾರ್ ಹೆಸರಿಗೆ ಒಂದು ಕಾರ್ಡ್. ಪ್ಯಾನ್ ಕಾರ್ಡ್ ಅಡುಗೆ ಮಾಡಲು. ವೋಟರ್ ಐಡಿ ತೋರಿಸಲು ಮಾತ್ರ, ಮತ ಚಲಾಯಿಸಲು ಅಲ್ಲ. ಆದಾಯ ತೆರಿಗೆ ರಿಟರ್ನ್ ನಿಮ್ಮ ಆದಾಯವನ್ನು ಹಿಂತಿರುಗಿಸಲು. ಚುನಾವಣಾ ಅಫಿಡವಿಟ್ ಸೃಜನಾತ್ಮಕ ಬರವಣಿಗೆಯ ಗುರುತು ಹಾಗೂ ಮೋದಿ ಒಂದು ಜೋಕ್!'' ಎಂದು ಪಕ್ಷ ಬಣ್ಣಿಸಿದೆ.

ನಿನ್ನೆ ನಿರ್ಧಾರವಾಗಿದ್ದಲ್ಲ: ಕೇಂದ್ರ

ಭಾರತೀಯ ಪಾಸ್‌ಪೋರ್ಟ್ ಪೌರತ್ವದ ಪುರಾವೆಯಲ್ಲ ಎಂಬ ತನ್ನ ನಿಲುವಿನಿಂದ ಉದ್ಭವಿಸಿರುವ ವಿವಾದಕ್ಕೆ ಗುರುವಾರ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಈ ನಿಲುವು ಹೊಸದಲ್ಲ ಅಥವಾ ಇತ್ತೀಚಿನ ನೀತಿ ಬದಲಾವಣೆಯೂ ಅಲ್ಲ ಎಂದು ಹೇಳಿದೆ.

''ಪಾಸ್‌ಪೋರ್ಟ್ ಪೌರತ್ವದ ಪುರಾವೆಯಲ್ಲ ಎನ್ನುವುದು ನಿನ್ನೆ ತೆಗೆದುಕೊಂಡ ನಿರ್ಧಾರವಲ್ಲ. ಈ ನಿಲುವು ದಶಕಗಳಿಂದಲೂ ಚಾಲ್ತಿಯಲ್ಲಿದೆ'' ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಧವಾರ ಪಾಸ್‌ಪೋರ್ಟ್ ಸೇವಾ ದಿವಸ್ ಅಂಗವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ, ಪಾಸ್‌ಪೋರ್ಟ್ ಮುಖ್ಯವಾಗಿ ಒಂದು ಪ್ರಯಾಣ ದಾಖಲೆಯಾಗಿದೆಯೇ ಹೊರತು ಅದನ್ನು ಪೌರತ್ವದ ನಿರ್ಣಾಯಕ ಪುರಾವೆಯಾಗಿ ಪರಿಗಣಿಸಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿತ್ತು.

ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ನ್ಯಾಯಾಲಯದ ತೀರ್ಪುಗಳನ್ನು ತೋರಿಸುವ ಮೂಲಕ ಸರಕಾರವು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಪಾಸ್‌ಪೋಟ್‌ಅನ್ನು ಎಂದಿಗೂ ಪೌರತ್ವದ ನಿರ್ಣಾಯಕ ಪುರಾವೆ ಎಂಬುದಾಗಿ ಪರಿಗಣಿಸಲಾಗಿಲ್ಲ ಎಂದು ಸರಕಾರ ಹೇಳಿಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries