ಬದಿಯಡ್ಕ: ಕರ್ನಾಟಕ ಏಕೀಕರಣ ಹೋರಾಟಗಾರ, ನಾಡೋಜ ಕವಿ ಡಾ. ಕಯ್ಯಾರ ಕಿಞಣ್ಣ ರೈ ಅವರ ಸ್ಮರಣಾರ್ಥ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕಾಸರಗೋಡು ಜಿಲ್ಲೆಯ ಪೆರಡಾಲದಲ್ಲಿ ನಿರ್ಮಿಸಿದ ಸಾಂಸ್ಕøತಿಕ ಭವನಕ್ಕೆ ಕಾಸರಗೋಡಿನ ನೂತನ ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಭೇಟಿ ನೀಡಿ, ಕಾಮಗಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯಕಟ್ಟೆ, ಬದಿಯಡ್ಕ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ನಿವೃತ್ತ ಪ್ರಾಂಶುಪಾಲ ಎ ಶ್ರೀನಾಥ್, ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಟಿ ಶಂಕರನಾರಾಯಣ ಭಟ್, ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯ ಅನ್ವರ್ ಸಾದಾತ್ ಉಪಸ್ಥಿತರಿದ್ದರು.
ಡಾ. ಕಯ್ಯಾರ ಅವರ ಕುಟುಂಬದವರು ನೀಡಿರುವ 31ಸೆಂಟ್ ಜಾಗದಲ್ಲಿ ಪ್ರಾಧಿಕಾರದ 2ಕೋಟಿ ರೂ. ಅನುದಾನದೊಂದಿಗೆ ಭವನ ತಲೆಯೆತ್ತಿದ್ದು, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿಯೊಂದಿಗೆ ಉದ್ಘಾಟನಾ ಕಾರ್ಯ ನೆರವೇರಲಿರುವುದಾಗಿ ಪ್ರಾಧಿಕಾರ ಸದಸ್ಯ ಎ.ಆರ್ ಸುಬ್ಬಯ್ಯಕಟ್ಟೆ ತಿಳಿಸಿದ್ದಾರೆ.



