ತಿರುವನಂತಪುರಂ: ಬಿಜೆಪಿ ನೇತೃತ್ವದ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಯುಡಿಎಫ್ ಸಜ್ಜಾಗಿರುವ ಬೆನ್ನಲ್ಲೇ, ಈ ನಿರ್ಣಯಕ್ಕೆ ಬೆಂಬಲ ನೀಡುವುದಿಲ್ಲ ಎಂಬ ಸುಳಿವನ್ನು ಎಲ್‌ಡಿಎಫ್ ನೀಡಿದೆ.
ಈ ಕುರಿತು ರವಿವಾರ ಪ್ರತಿಕ್ರಿಯಿಸಿರುವ ಸಿಪಿಎಂ ರಾಜ್ಯ ಸಮಿತಿಯ ಸದಸ್ಯ ಹಾಗೂ ಮಾಜಿ ಸಚಿವ ವಿ. ಸಿವನ್ ಕುಟ್ಟಿ, "ಎಲ್‌ಡಿಎಫ್ ಈ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡುವುದಿಲ್ಲ.
ಕಾಂಗ್ರೆಸ್ ಬಿಜೆಪಿಯ 'ಬಿ' ತಂಡವಾಗಿದೆ" ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, "ತಿರುವನಂತಪುರಂ ಮಹಾನಗರ ಪಾಲಿಕೆ ಬಿಜೆಪಿ ನಾಯಕತ್ವದಡಿ ಆಡಳಿತಾತ್ಮಕ ನಿಷ್ಕ್ರಿಯತೆಗೆ ಗುರಿಯಾಗಿದೆ. ಮಹಾನಗರ ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಕಲ್ಯಾಣ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಬೀದಿ ನಾಯಿಗಳ ಉಪಟಳ ಮಿತಿಮೀರಿದೆ. ತ್ಯಾಜ್ಯ ನಿರ್ವಹಣೆ ಮತ್ತು ನೈರ್ಮಲ್ಯ ಕಾರ್ಯಗಳಲ್ಲಿ ವೈಫಲ್ಯ ಕಂಡುಬಂದಿದ್ದು, ಮಹಾನಗರ ಪಾಲಿಕೆಯ ಕಾರ್ಯನಿರ್ವಹಣೆ ಹದಗೆಟ್ಟಿರುವುದನ್ನು ಇದು ಸೂಚಿಸುತ್ತದೆ" ಎಂದು ಅವರು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಆಡಳಿತಾತ್ಮಕ ವೈಫಲ್ಯಗಳ ವಿರುದ್ಧ ಎಲ್‌ಡಿಎಫ್ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದೆ. ಆದರೆ, ಎಲ್‌ಡಿಎಫ್‌ನ ಈ ಹೋರಾಟವನ್ನು ಹಾಳುಗೆಡವಲು ಯುಡಿಎಫ್ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಅವಿಶ್ವಾಸ ನಿರ್ಣಯವನ್ನು "ಸಾರ್ವಜನಿಕ ಪ್ರಹಸನ" ಎಂದು ವ್ಯಂಗ್ಯವಾಡಿದ ಸಿವನ್ ಕುಟ್ಟಿ, "ಈ ನಿರ್ಣಯ ಅಂಗೀಕಾರವಾಗಲು ಅಗತ್ಯ ಸಂಖ್ಯಾಬಲ ಇಲ್ಲ ಎಂಬುದು ಯುಡಿಎಫ್‌ಗೆ ತಿಳಿದಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಒಟ್ಟು 101 ಕೌನ್ಸಿಲರ್‌ಗಳಿದ್ದು, ಬಿಜೆಪಿಗೆ 50, ಎಲ್‌ಡಿಎಫ್‌ಗೆ 29, ಯುಡಿಎಫ್‌ಗೆ 19 ಹಾಗೂ ಇಬ್ಬರು ಪಕ್ಷೇತರ ಕೌನ್ಸಿಲರ್‌ಗಳಿದ್ದಾರೆ. ಅವಿಶ್ವಾಸ ನಿರ್ಣಯ ಅಂಗೀಕಾರವಾಗಲು ಯುಡಿಎಫ್‌ಗೆ 34 ಕೌನ್ಸಿಲರ್‌ಗಳ ಬೆಂಬಲ ಅಗತ್ಯವಿದೆ. ಆದರೆ, ಸದ್ಯ ಅದು 15 ಕೌನ್ಸಿಲರ್‌ಗಳ ಕೊರತೆಯನ್ನು ಎದುರಿಸುತ್ತಿದೆ" ಎಂದು ಹೇಳಿದ್ದಾರೆ.
ಮಹಾನಗರ ಪಾಲಿಕೆಯ ಆಡಳಿತಾತ್ಮಕ ವೈಫಲ್ಯಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಹಾಗೂ ಸದ್ಯ ನಡೆಯುತ್ತಿರುವ ಎಲ್‌ಡಿಎಫ್ ಪ್ರತಿಭಟನೆಗಳನ್ನು ದುರ್ಬಲಗೊಳಿಸಲು ಬಿಜೆಪಿ ಮತ್ತು ಯುಡಿಎಫ್ ನಡುವೆ ಒಪ್ಪಂದ ಏರ್ಪಟ್ಟಿರುವ ಕಾರಣದಿಂದ ಈ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಯುಡಿಎಫ್ ಬಿಜೆಪಿಯ 'ಬಿ' ತಂಡದ ಮಟ್ಟಕ್ಕೆ ಕುಸಿದಿದೆ ಎಂದೂ ಅವರು ಟೀಕಿಸಿದ್ದಾರೆ.
ಇದೇ ವೇಳೆ, ತಿರುವನಂತಪುರಂ ಮಹಾನಗರ ಪಾಲಿಕೆಯ ಆಡಳಿತಾತ್ಮಕ ನಿಷ್ಕ್ರಿಯತೆಯನ್ನು ಅಂತ್ಯಗೊಳಿಸಲು ರಾಜ್ಯ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿರುವ ಸಿವನ್ ಕುಟ್ಟಿ, ಬಿಜೆಪಿ ನೇತೃತ್ವದ ಮಹಾನಗರ ಪಾಲಿಕೆ ಆಡಳಿತದ ವಿರುದ್ಧ ಎಲ್‌ಡಿಎಫ್ ತನ್ನ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಘೋಷಿಸಿದ್ದಾರೆ.

