ನವದೆಹಲಿ: ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಅರುಣಾಚಲ ಪ್ರದೇಶದೊಳಗೆ ಅತಿಕ್ರಮಣ ಮಾಡಿದ್ದು, ಭಾರತದ ಭೂಭಾಗದಲ್ಲಿ ಮಿಲಿಟರಿ ಶಿಬಿರಗಳನ್ನು ತೆರೆದಿದೆ ಎಂಬ ವರದಿಗಳನ್ನು ಭಾರತೀಯ ಸೇನೆ ತಿರಸ್ಕರಿಸಿದೆ. ಜತೆಗೆ, ಈ ವರದಿಗಳು ಸುಳ್ಳು ಮತ್ತು ಆಧಾರರಹಿತ ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ಸಿರಿ ಜಿಲ್ಲೆಯಲ್ಲಿ ಸುಬನ್ಸಿರಿ ನದಿ ದಂಡೆಯಲ್ಲಿ ಚೀನಾ ಹಳ್ಳಿಯೊಂದನ್ನು ನಿರ್ಮಾಣ ಮಾಡಿದೆ ಎಂದು ನಾಹ್ (ಓಚಿh) ಬುಡಕಟ್ಟು ಸಮುದಾಯವನ್ನು ಪ್ರತಿನಿಧಿಸುವ ಸಂಸ್ಥೆಯಾದ 'ನಾಹ್ ವೆಲ್ಫೇರ್ ಸೊಸೈಟಿ' ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಸೇನೆಯಿಂದ ಪ್ರತಿಕ್ರಿಯೆ ಬಂದಿದೆ.
ಚೀನಾದ ಅತಿಕ್ರಮಣದ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿ ನಾಹ್ ವೆಲ್ಫೇರ್ ಸೊಸೈಟಿಯು ಜಿಲ್ಲಾಧಿಕಾರಿಗೆ ಈಚೆಗೆ ಮನವಿ ಪತ್ರ ಸಲ್ಲಿಸಿತ್ತು.
'ಪಿಎಲ್ಎ ಕಳೆದ ಆರು ವರ್ಷಗಳಲ್ಲಿ ಅಪ್ಪರ್ ಸುಬನ್ಸಿರಿ ಜಿಲ್ಲೆಯ ಹಲವೆಡೆ ಭೂಪ್ರದೇಶವನ್ನು ವಿಸ್ತರಿಸಿದೆ ಮತ್ತು ಸ್ಥಳೀಯ ನಿವಾಸಿಗಳು ಕೃಷಿ, ಜಾನುವಾರು ಮೇಯಿಸುವಿಕೆ ಹಾಗೂ ಬೇಟೆಯಾಡಲು ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ಭೂಮಿಯನ್ನು ಪ್ರವೇಶಿಸದಂತೆ ತಡೆಯುತ್ತಿದೆ' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

