ನವದೆಹಲಿ: ತುರ್ತುಪರಿಸ್ಥಿತಿಯ ನೆಪದಲ್ಲಿ ಕಾಂಗ್ರೆಸ್ ನಡೆಸಿದ 'ಸಂವಿಧಾನದ ಅಪರಾಧಿ ಹತ್ಯೆ'ಯನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಗುರುವಾರ ಒತ್ತಾಯಿಸಿದ್ದಾರೆ.
ಎನ್‌ಡಿಎಂಸಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ 'ಸಂವಿಧಾನ ಹತ್ಯಾ ದಿವಸ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, '50 ವರ್ಷಗಳಾದರೂ ತುರ್ತುಪರಿಸ್ಥಿತಿಯ ಗಾಯಗಳು ವಾಸಿಯಾಗಿಲ್ಲ.
ಇದು ಹೃದಯ ವಿದ್ರಾವಕ ಸತ್ಯ ಮತ್ತು ಪಾಠ. ಸಂವಿಧಾನವನ್ನು ನಂಬುವ ಪ್ರತಿಯೊಬ್ಬರಿಗೂ ಈ ಹೇಯ ಅಪರಾಧದ ಅರಿವಾಗಲು ಪಠ್ಯದಲ್ಲಿ ಸೇರಿಸಬೇಕು' ಎಂದು ಹೇಳಿದ್ದಾರೆ.
ಕಾಂಗ್ರೆಸ್ ದೇಶದ 28 ಸ್ಥಳಗಳಲ್ಲಿ ಗುರುವಾರದಂದು ಏಕಕಾಲಕ್ಕೆ ಆರಂಭಿಸಿದ 40 ದಿನಗಳ 'ಛಾತ್ರೋಂ ಕಿ ಗೂಂಜ್' ಅಭಿಯಾನ ಕುರಿತು ನಖ್ವಿ ಆಕ್ರೋಶ ಹೊರಹಾಕಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬ ಸೇರಿದಂತೆ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸುವ ಈ ಅಭಿಯಾನದ ಮೂಲಕ ಕಾಂಗ್ರೆಸ್ ತನ್ನ ಪಾಪಗಳನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದೆ ಎಂದು ನಖ್ವಿ ಆರೋಪಿಸಿದ್ದಾರೆ.
'ತುರ್ತುಪರಿಸ್ಥಿತಿಯಲ್ಲಿ ಮಾಡಿದ ಪಾಪಗಳಿಗೆ ದೇಶದಾದ್ಯಂತ ತಿರುಗಿ ಕ್ಷಮೆ ಕೇಳುವ ಬದಲು, ಜಮೀನ್ದಾರಿ ಅಹಂಕಾರದಲ್ಲಿ ಮುಳುಗಿರುವ ಕಾಂಗ್ರೆಸ್, ಸಾವಿರಾರು ಯುವಕರ ರಕ್ತ ಮೆತ್ತಿದ ಕೈಗಳನ್ನು ನಾಚಿಕೆಯಿಲ್ಲದೆ ಪ್ರದರ್ಶಿಸುತ್ತಿದೆ' ಎಂದು ಅವರು ಗುಡುಗಿದ್ದಾರೆ.
ಮೋದಿ ಸರ್ಕಾರವು ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸ್ಸೇತರ ಸರ್ಕಾರವಾಗಿದ್ದು, ಭಾರತವನ್ನು 'ಉತ್ತಮ ಆಡಳಿತ ಮತ್ತು ಒಳಗೊಳ್ಳುವ ಸಬಲೀಕರಣದ ಜಾಗತಿಕ ಬ್ರಾಂಡ್' ಆಗಿ ರೂಪಿಸಿದೆ. ಈ ಸರ್ಕಾರ ಕಾಂಗ್ರೆಸ್ ಪಕ್ಷದ ಜಮೀನ್ದಾರಿ ಅಹಂಕಾರವನ್ನು ಛಿದ್ರಗೊಳಿಸಿದೆ ಎಂದು ನಖ್ವಿ ಅಭಿಪ್ರಾಯಪಟ್ಟರು.

