ಮುಂಬೈ: ರೈತರ ಖಾತೆಗಳಿಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 23ನೇ ಕಂತಿನ ಹಣ ಪಾವತಿಯಾಗಿದೆ. ಆದರೆ ಮಹಾರಾಷ್ಟ್ರದ ರೈತ ಮಹಿಳೆಯೊಬ್ಬರ ಮೊಬೈಲ್ಗೆ ಖಾತೆಗೆ 1 ಪೈಸೆ ಪಾವತಿಯಾಗಿದೆ ಎಂಬ ಸಂದೇಶ ಬಂದಿದೆ.
ಬಾಂದ್ರಾ ಜಿಲ್ಲೆಯ ಜೀವನಾಲಾ ಎನ್ನುವ ಗ್ರಾಮದ 65 ವರ್ಷದ ಲಕ್ಷ್ಮಿಬಾಯಿ ಎನ್ನುವವರ ಖಾತೆಗೆ ಕೇವಲ 1 ಪೈಸೆ ಪಾವತಿಯಾಗಿರುವ ಸಂದೇಶ ಬಂದಿದೆ.
ಇದನ್ನು ನೋಡಿ ಲಕ್ಷ್ಮಿಬಾಯಿ ಕುಟುಂಬ ಗಾಬರಿಯಾಗಿದೆ.
ಲಕ್ಷ್ಮಿಬಾಯಿ ಅವರ ಪುತ್ರ ಖೆಮರಾಜ್ ಗಿರೆಪುಂಜೆ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕುಟುಂಬ ₹2 ಸಾವಿರ ಹಣದ ನಿರೀಕ್ಷೆಯಲ್ಲಿತ್ತು, ಆದರೆ ಕೇವಲ 1 ಪೈಸೆ ಪಾವತಿಯಾಗಿದೆ ಎಂದು ಸಂದೇಶ ಬಂದಿದೆ ಎಂದಿದ್ದಾರೆ. ಖಾರಿಫ್ ಬಿತ್ತನೆ ಋತು ಆರಂಭವಾಗುತ್ತಿದೆ ಈಗ ಬೀಜ ಮತ್ತು ರಸಗೊಬ್ಬರಗಳಿಗೆ ತುರ್ತಾಗಿ ಹಣದ ಅಗತ್ಯವಿದೆ ಎಂದು ಅಲವತ್ತುಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದಿದ್ದಾರೆ.
ಬಾಂದ್ರಾ ಜಿಲ್ಲೆಯ ಕೃಷಿ ಅಧಿಕಾರಿ ಸಂಗೀತಾ ಮಾನೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾಂತ್ರಿಕ ದೋಷದಿಂದ ಅವರಿಗೆ ತಪ್ಪಾದ ಸಂದೇಶ ಹೋಗಿದೆ. ದಾಖಲೆ ಪ್ರಕಾರ ಪಲಾನುಭವಿ ಖಾತೆಗೆ ₹2 ಸಾವಿರ ಪಾವತಿಯಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರವು ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ವರ್ಷದಲ್ಲಿ ಮೂರು ಕಂತಿನಲ್ಲಿ ನೀಡುವ ಪಿಎಂ ಕಿಸಾನ್ ಯೋಜನೆಯ 23ನೇ ಕಂತು ಜೂನ್ 20ರಂದು ಜಮೆಯಾಗಿದೆ.
ಯೋಜನೆ ಅಡಿಯಲ್ಲಿ ದೇಶದಾದ್ಯಂತ 9.44 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಸುಮಾರು ₹18,880 ಕೋಟಿ ತಲುಪಲಿದೆ ಎಂದು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದರು.

