HEALTH TIPS

VB-G RAM G ಯೋಜನೆಯಡಿ ಹೆಚ್ಚಿದ ವೆಚ್ಚದ ಹೊರೆ; ಬಿಜೆಪಿ ಆಡಳಿತದ ರಾಜ್ಯಗಳಿಂದಲೂ ಆಕ್ಷೇಪ

ನವದೆಹಲಿ: ಜುಲೈ 1ರಿಂದ ಜಾರಿಗೆ ಬರಲಿರುವ ವಿಕ್ಷಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಯೋಜನೆಯಡಿ ರಾಜ್ಯಗಳು ಹೆಚ್ಚಿನ ಆರ್ಥಿಕ ಹೊರೆ ಭರಿಸಬೇಕಾಗುವ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತದ ಬಿಹಾರ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ.

ಪ್ರಸ್ತುತ ಜಾರಿಯಲ್ಲಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಅಡಿಯಲ್ಲಿ ಗ್ರಾಮೀಣ ಕಾರ್ಮಿಕರ ವೇತನ ವೆಚ್ಚವನ್ನು ಕೇಂದ್ರ ಸರಕಾರವೇ ಸಂಪೂರ್ಣವಾಗಿ ಭರಿಸುತ್ತಿದೆ. ಆದರೆ ಹೊಸ VB-G RAM G ಯೋಜನೆಯಡಿ ಹೆಚ್ಚಿನ ರಾಜ್ಯಗಳು ಒಟ್ಟು ವೆಚ್ಚದ ಶೇ 40ರಷ್ಟನ್ನು ಭರಿಸಬೇಕಾಗುತ್ತದೆ.

ಈ ವಿಷಯವು ಜನರ ಮಾಹಿತಿ ಹಕ್ಕುಗಾಗಿ ರಾಷ್ಟ್ರೀಯ ಅಭಿಯಾನ (NCPRI) ಕಾರ್ಯಕರ್ತ ಚಕ್ರಧರ್ ಬುದ್ಧ ಸಲ್ಲಿಸಿದ್ದ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ನೀಡಿದ ಉತ್ತರದಿಂದ ಬಹಿರಂಗವಾಗಿದೆ. ಹೊಸ ಯೋಜನೆ ಕುರಿತು ರಾಜ್ಯ ಸರಕಾರಗಳೊಂದಿಗೆ ನಡೆಸಿದ ಸಮಾಲೋಚನೆಗಳ ದಾಖಲೆಗಳನ್ನು ಅವರು ಕೋರಿದ್ದರು.

ಕೇಂದ್ರ ಸರಕಾರವು 13 ರಾಜ್ಯಗಳ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಬಿಹಾರ, ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳು ಹೊಸ ನಿಧಿ ಹಂಚಿಕೆ ಮಾದರಿಯನ್ನು ಮರುಪರಿಶೀಲಿಸುವಂತೆ ಆಗ್ರಹಿಸಿವೆ.

NREGA ಸಂಘರ್ಷ ಮೋರ್ಚಾ ನಡೆಸಿದ ವಿಶ್ಲೇಷಣೆಯ ಪ್ರಕಾರ, VB-G RAM G ಯೋಜನೆಯಡಿ ಬಿಹಾರಕ್ಕೆ 4,477 ಕೋಟಿ ರೂ. ಹೊರೆ ಬೀಳಲಿದ್ದು, ಈ ಮೊತ್ತವು ಸರಕಾರ ಭರವಸೆ ನೀಡಿರುವ 125 ದಿನಗಳ ಉದ್ಯೋಗವನ್ನು ಒದಗಿಸಲು ಸಾಕಾಗುವುದಿಲ್ಲ. 125 ದಿನಗಳ ಉದ್ಯೋಗ ಖಾತರಿಯನ್ನು ಜಾರಿಗೊಳಿಸಲು ಬಿಹಾರವು 15,939 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ.

ಮಧ್ಯಪ್ರದೇಶಕ್ಕೆ 4,168 ಕೋಟಿ ರೂ. ಹೊರೆ ಬೀಳಲಿದ್ದು, ಇದು ಕೇವಲ 43 ದಿನಗಳ ಉದ್ಯೋಗ ಒದಗಿಸಲು ಮಾತ್ರ ಸಾಕಾಗಲಿದೆ. 125 ದಿನಗಳ ಉದ್ಯೋಗ ಖಾತರಿಯನ್ನು ಜಾರಿಗೊಳಿಸಲು ರಾಜ್ಯವು 20,037 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ ಎಂದು ವಿಶ್ಲೇಷಣೆ ತಿಳಿಸಿದೆ.

ಜಾರ್ಖಂಡ್‌ಗೆ 1,804 ಕೋಟಿ ರೂ. ವೆಚ್ಚದ ಹೊಣೆಗಾರಿಕೆ ನೀಡಲಾಗಿದ್ದು, ಇದು ಕೇವಲ 41 ದಿನಗಳ ಉದ್ಯೋಗಕ್ಕೆ ಮಾತ್ರ ಸಾಕಾಗಲಿದೆ. 125 ದಿನಗಳ ಉದ್ಯೋಗ ಖಾತರಿಯನ್ನು ಒದಗಿಸಲು ಜಾರ್ಖಂಡ್‌ಗೆ 9,293 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಜಾರ್ಖಂಡ್ ಸರಕಾರವು ಶೇ 40ರಷ್ಟು ರಾಜ್ಯದ ಪಾಲನ್ನು ಭರಿಸುವುದು ಕಷ್ಟಕರವಾಗಲಿದೆ ಎಂದು ತಿಳಿಸಿದೆ.

ಶೇ 90:10ರ ಕೇಂದ್ರ-ರಾಜ್ಯ ವೆಚ್ಚ ಹಂಚಿಕೆ ಮಾದರಿಯಡಿ ಬರುವ ಸಿಕ್ಕಿಂ ಮತ್ತು ಉತ್ತರಾಖಂಡ ರಾಜ್ಯಗಳೂ ಈ ಹೊಸ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಕೋರಿವೆ. ಉತ್ತರಾಖಂಡ ಸರಕಾರವು ಪರ್ವತ ಪ್ರದೇಶಗಳಲ್ಲಿನ ಸವಾಲುಗಳನ್ನು ಉಲ್ಲೇಖಿಸಿ, ವೇತನ ವೆಚ್ಚವನ್ನು ಕೇಂದ್ರ ಸರಕಾರವೇ ಸಂಪೂರ್ಣವಾಗಿ ಭರಿಸಬೇಕು ಎಂದು ಆಗ್ರಹಿಸಿದೆ.

ಇದಲ್ಲದೆ, 13 ರಾಜ್ಯಗಳ ಪೈಕಿ ಐದು ರಾಜ್ಯಗಳು ಗ್ರಾಮೀಣ ಕಾರ್ಮಿಕರ ವೇತನ ಹೆಚ್ಚಳಕ್ಕೆ ಒತ್ತಾಯಿಸಿವೆ. ಬಿಹಾರವು ದಿನಗೂಲಿಯನ್ನು 255 ರೂ.ನಿಂದ 413 ರೂ.ಗೆ ಹೆಚ್ಚಿಸಲು ಕೋರಿದ್ದರೆ, ಜಮ್ಮು ಮತ್ತು ಕಾಶ್ಮೀರವು 272 ರೂ.ನಿಂದ 311 ರೂ.ಗೆ ಹೆಚ್ಚಳಕ್ಕೆ ಆಗ್ರಹಿಸಿದೆ. ಜಾರ್ಖಂಡ್ ಮತ್ತು ಪಂಜಾಬ್ ಸರಕಾರಗಳು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ವೇತನ ನಿಗದಿಪಡಿಸಬೇಕು ಎಂದು ಅಭಿಪ್ರಾಯಪಟ್ಟಿವೆ.

ಕೃಷಿ ಚಟುವಟಿಕೆಗಳು ಗರಿಷ್ಠ ಮಟ್ಟದಲ್ಲಿರುವ ಅವಧಿಯಲ್ಲಿ 60 ದಿನಗಳ ಉದ್ಯೋಗ ನಿರ್ಬಂಧ ವಿಧಿಸುವ ಪ್ರಸ್ತಾವನೆಗೆ ಕರ್ನಾಟಕ, ತೆಲಂಗಾಣ ಮತ್ತು ಪಂಜಾಬ್ ಸೇರಿದಂತೆ ಕನಿಷ್ಠ ನಾಲ್ಕು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ.

ಬಹುತೇಕ ಎಲ್ಲಾ ರಾಜ್ಯಗಳು ವೇತನ ಮತ್ತು ಸಾಮಗ್ರಿ ವೆಚ್ಚಗಳ ಬಾಕಿ ಪಾವತಿಯಲ್ಲಿ ಆಗುತ್ತಿರುವ ವಿಳಂಬವನ್ನು ಉಲ್ಲೇಖಿಸಿದ್ದು, ಹೊಸ ಯೋಜನೆಯಡಿ ಈ ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries