ದುಬೈ/ಟೆಹರಾನ್: ಜೋರ್ಡನ್‌ನ ಬಂದರು ಸೇರಿದಂತೆ ವಿವಿಧ ಸ್ಥಳಗಳನ್ನು ಗುರಿಯಾಗಿಸಿಕೊಂಡು ಇರಾನ್ ಸೇನೆಯು ಬುಧವಾರ ಕ್ಷಿಪಣಿ ದಾಳಿ ನಡೆಸಿದೆ, ಅತ್ತ ಇರಾನ್ ಮೇಲಿನ ದಾಳಿಯನ್ನು ಅಮೆರಿಕವೂ ಮುಂದುವರಿಸಿದೆ. ಇರಾನ್‌ನ ನಾಲ್ಕು ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ.
ಇನ್ನೆರಡು ಕ್ಷಿಪಣಿಗಳು ಜನವಸತಿ ಇಲ್ಲದ ಪ್ರದೇಶದಲ್ಲಿ ಬಿದ್ದಿವೆ. ಅಲ್ಲದೇ, ಇರಾನ್ ಉಡಾಯಿಸಿದ್ದ ನಾಲ್ಕು ಡ್ರೋನ್‌ಗಳನ್ನು ಕೂಡ ನಾಶಪಡಿಸಲಾಗಿದೆ ಎಂದು ಜೋರ್ಡನ್ ಸೇನೆ ಹೇಳಿದೆ.
ಇರಾನ್ ವಾಯುಪಡೆಯು ಜೋರ್ಡನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ. ಅಮೆರಿಕಕ್ಕೆ ಸೇರಿದ ಕಟ್ಟಡದಲ್ಲಿದ್ದ ಕೆಲವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಮತ್ತು ಅಮೆರಿಕದ ಎರಡು ಸೇನಾ ಹೆಲಿಕಾಪ್ಟರ್‌ಗೆ ಹಾನಿಯಾಗಿದೆ ಎಂದು ಇರಾನ್ ಸೇನೆ ಹೇಳಿಕೊಂಡಿದೆ.
'11ನೇ ರಾತ್ರಿಯೂ ಇರಾನ್ ಮೇಲಿನ ದಾಳಿಯನ್ನು ಮುಂದುವರಿಸಲಾಗಿದೆ. ವೈಮಾನಿಕ ಸಾಧನಗಳನ್ನು ನಿರ್ವಹಿಸುವ ಸ್ಥಳ ಮತ್ತು ಡ್ರೋನ್ ಸಂಗ್ರಹಣಾ ಸ್ಥಳಗಳೂ ನಮ್ಮ ಗುರಿಯಾಗಿದ್ದವು' ಎಂದು ಅಮೆರಿಕ ಬುಧವಾರ ಹೇಳಿದೆ.
ಬುಶೆಹರ್, ಅಜರ್‌ಬೈಜಾನ್, ಹಮದಾನ್, ಖುಜೆಸ್ತಾನ್ ಹಾಗೂ ಬಲೂಚಿಸ್ತಾನ್ ಸೇರಿ ಹಲವು ಪ್ರಾಂತ್ಯಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಐಆರ್‌ಎನ್‌ಎ ವರದಿ ಮಾಡಿದೆ.
ಹೊರ್ಮುಜ್ ಜಲಸಂಧಿಯಲ್ಲಿರುವ ಲರಕ್ ದ್ವೀಪದ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ತಸ್ನಿಮ್ ವರದಿ ಮಾಡಿದೆ.
ಹೊರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ ಮೇಲೆ ಮಂಗಳವಾರ ದಾಳಿ ನಡೆಸಿದ ಬೆನ್ನಲ್ಲೆ ಅಮೆರಿಕ ದಾಳಿಯನ್ನು ತೀವ್ರಗೊಳಿಸಿದೆ. ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಇರಾನ್ ಪದೇ ಪದೇ ದಾಳಿ ನಡೆಸುತ್ತಿದೆ.
ಪ್ರಮುಖ ಬೆಳವಣಿಗೆಗಳು
* ಇರಾನ್‌ನ ಕ್ಷಿಪಣಿಗಳನ್ನು ಹೊಡೆದು ಉರುಳಿಸಿದ್ದಾಗಿ ಬಹರೇನ್ ಸೇನೆ ಹೇಳಿದೆ
* ಹೊರ್ಮುಜ್ ಜಲಸಂಧಿಯನ್ನು ನಿಯಂತ್ರಿಸುವುದಾಗಿ ಮತ್ತು ಟೋಲ್ ಸಂಗ್ರಹಿಸುವುದಾಗಿ ಇರಾನ್ ಹೇಳಿರುವುದು ಜಾಗತಿಕ ಆರ್ಥಿಕತೆ ಮತ್ತು ಸಾಗರ ಸಂಚಾರ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುತ್ತದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಏಷ್ಯಾ ರಾಷ್ಟ್ರದ ನಾಯಕರಿಗೆ ಬುಧವಾರ ಎಚ್ಚರಿಕೆ ನೀಡಿದ್ದಾರೆ.
* ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತೆ ತೀವ್ರಗೊಂಡಿರುವ ಕಾರಣ ಇಸ್ರೇಲ್‌ನ ಟೆಲ್‌ಅವೀವ್ ಮತ್ತು ದೆಹಲಿ ನಡುವಿನ ವಿಮಾನ ಸೇವೆಯನ್ನು ರದ್ದುಗೊಳಿಸಿರುವುದನ್ನು ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.

