ಜಕಾರ್ತ : ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 78 ಜನರಿದ್ದ ದೋಣಿಯು ಇಂಜಿನ್ ವೈಫಲ್ಯದಿಂದಾಗಿ ದಕ್ಷಿಣ ಸುಲಾವೆಸಿ ಪ್ರಾಂತ್ಯದ ಸೆಲಯಾರ್ ದ್ವೀಪಗಳ ಬಂದರಿನ ಬಳಿ ಮುಳುಗಿದ್ದು ಒಬ್ಬರು ಸಾವನ್ನಪ್ಪಿರುವುದು ಖಚಿತವಾಗಿದೆ ಎಂದು ಕರಾವಳಿ ರಕ್ಷಣಾ ಪಡೆಯ ಮೂಲಗಳು ತಿಳಿಸಿದೆ.
ನಾಪತ್ತೆಯಾಗಿರುವ 20 ಜನರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳೀಯ ಮೀನುಗಾರರೊಬ್ಬರು ಹರಡಿದ್ದ ಮೀನುಗಾರಿಕಾ ಬಲೆಗೆ ಸಿಲುಕಿ ತೇಲುತ್ತಿದ್ದ ಐವರು ಬದುಕುಳಿದವರನ್ನು ಪತ್ತೆಹಚ್ಚಲಾಗಿದೆ. ಏಳು ವರ್ಷದ ಬಾಲಕಿ, ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷನನ್ನು ರಕ್ಷಿಸಿ ಮೀನುಗಾರಿಕಾ ದೋಣಿಯ ಮೂಲಕ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
17,000ಕ್ಕೂ ಹೆಚ್ಚು ದ್ವೀಪಗಳ ದ್ವೀಪಸಮೂಹವಾಗಿರುವ ಇಂಡೋನೇಷ್ಯಾದಲ್ಲಿ ಪ್ರಯಾಣಿಕರ ದೋಣಿಗಳು ಪ್ರಮುಖ ಸಾರಿಗೆ ವ್ಯವಸ್ಥೆಯಾಗಿವೆ.

