ಪ್ಯಾರಿಸ್: ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಭಾರತದ ಟೆಕ್ ದೈತ್ಯ ಇನ್ಫೊಸಿಸ್‌ಗೆ ಫ್ರಾನ್ಸ್‌ನ ಕಾರ್ಮಿಕ ಇಲಾಖೆ ಸುಮಾರು 1.75 ಲಕ್ಷ ಯೂರೋ(ಸುಮಾರು ₹2 ಕೋಟಿ) ದಂಡ ವಿಧಿಸಿದೆ ಎಂದು ವರದಿಯಾಗಿದೆ.
ಇನ್ಫೊಸಿಸ್ ಉದ್ಯೋಗಿಗಳ ಕೆಲಸದ ಅವಧಿಯನ್ನು ದಾಖಲಿಸುವ ವ್ಯವಸ್ಥೆಯು ದೇಶದ ಕಾರ್ಮಿಕ ನಿಯಮಾವಳಿಗಳಿಗೆ ಅನುಗುಣವಾಗಿಲ್ಲದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಲ್ಲಿನ ಕಾರ್ಮಿಕ ಪ್ರಾಧಿಕಾರ ತಿಳಿಸಿದೆ.
'ಇನ್ಫೊಸಿಸ್ 'ವರ್ಕಿಂಗ್ ಟೈಮ್ ರೆಕಾರ್ಡಿಂಗ್ ಸಿಸ್ಟಮ್'ನಲ್ಲಿ ಕೆಲವು ದೋಷಗಳು ಪತ್ತೆಯಾಗಿವೆ. ಉದ್ಯೋಗಿಗಳು ಎಷ್ಟು ಗಂಟೆ ಕೆಲಸ ಮಾಡಿದ್ದಾರೆ, ಹೆಚ್ಚುವರಿ ಕೆಲಸ ಮಾಡಿದ್ದಾರೆಯೇ? ಎಂಬುದನ್ನು ನಿಖರವಾಗಿ ದಾಖಲಿಸುವಲ್ಲಿ ಕಂಪನಿಯು ವಿಫಲವಾಗಿದೆ' ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಫ್ರಾನ್ಸ್‌ನಲ್ಲಿ ಕಾರ್ಮಿಕರ ಹಕ್ಕುಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಅಲ್ಲಿನ ಕಾನೂನುಗಳ ಪ್ರಕಾರ ಕಂಪನಿಗಳು ಉದ್ಯೋಗಿಗಳ ಕೆಲಸದ ಅವಧಿ, ವಿಶ್ರಾಂತಿ ಅವಧಿ ಹಾಗೂ ಹೆಚ್ಚುವರಿ ಕೆಲಸದ ಅವಧಿ(ಓವರ್‌ಟೈಮ್) ಮಾಹಿತಿಯನ್ನು ನಿಖರವಾಗಿ ದಾಖಲಿಸಬೇಕು. ಈ ದಾಖಲೆಗಳು ಸರ್ಕಾರದ ಪರಿಶೀಲನೆಗೆ ಅನುಕೂಲವಾಗುವ ರೀತಿಯಲ್ಲಿ ಇರಬೇಕೆಂಬ ನಿಯಮವೂ ಇದೆ.
ಇನ್ಫೋಸಿಸ್ ತನ್ನ ಷೇರುಪೇಟೆ ಸಲ್ಲಿಕೆಯಲ್ಲಿ ಈ ದಂಡದ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಇದರಿಂದ ಕಂಪನಿಯ ಹಣಕಾಸು ಸ್ಥಿತಿ ಅಥವಾ ವ್ಯವಹಾರ ಚಟುವಟಿಕೆಗಳ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ, ಸಂಬಂಧಿತ ವಿಷಯವನ್ನು ಪರಿಶೀಲಿಸಿ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ.

