ಕೀವ್: ಉಕ್ರೇನ್ ರಾಜಧಾನಿ ಕೀವ್ ಮೇಲೆ ಸೋಮವಾರ(ಜುಲೈ 6) ರಷ್ಯಾ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾ ಮೇಲೆ ಬೃಹತ್ ಪ್ರಮಾಣದ ದಾಳಿ ನಡೆಸಲಾಗುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ.
ಈ ಕುರಿತು ಟೆಲಿಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೀವ್ ಸೇನಾ ಆಡಳಿತದ ಮುಖ್ಯಸ್ಥ ತೈಮೂರ್ ಟ್ಕಾಚೆಂಕೊ, ನಾಗರಿಕ ಕಟ್ಟಡಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿದೆ. ಘಟನೆಯಲ್ಲಿ ಹಲವು ಕಟ್ಟಡಗಳು ಸಂಪೂರ್ಣ ನಾಶವಾಗಿವೆ. ಅದರಲ್ಲಿ ಸಾಮಾನ್ಯ ಜನರು ಜೀವನ ನಡೆಸುತ್ತಿದ್ದರು ಎಂದು ಹೇಳಿದ್ದಾರೆ.
ಸ್ಪೋಟದ ಸದ್ದು ನಗರದಾದ್ಯಂತ ಕೇಳಿಸುತ್ತಿದೆ. ನಾಗರಿಕರು ಮೆಟ್ರೊ ನಿಲ್ದಾಣಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾಗಿ ವರದಿಯಾಗಿದೆ.
ಟರ್ಕಿಯಲ್ಲಿ ನಡೆಯಲಿರುವ ನ್ಯಾಟೊ ಶೃಂಗಸಭೆಯ ಮುನ್ನಾದಿನವೇ ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ದಾಳಿಯನ್ನು ಮುಂದುವರೆಸಿದೆ.
ಕಳೆದ ಗುರುವಾರ(ಜುಲೈ 2) ಉಕ್ರೇನ್ ಮೇಲೆ ರಷ್ಯಾ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿತ್ತು. ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.

