HEALTH TIPS

50 ಬಾರಿ ಪ್ರಯತ್ನಿಸಿದರೂ ಸಿಗಲಿಲ್ಲ ಸರಕಾರಿ ಉದ್ಯೋಗ; ಬಿಟೆಕ್ ನಲ್ಲಿ ಚಿನ್ನದ ಪದಕ ವಿಜೇತ ಮೃತ ಸ್ಥಿತಿಯಲ್ಲಿ ಪತ್ತೆ

 ಕಾನ್ಪುರ: ಸುಮಾರು 50 ಬಾರಿ ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದರೂ ಯಶಸ್ಸು ಸಿಗದ ಹಿನ್ನೆಲೆಯಲ್ಲಿ 23 ವರ್ಷದ ಬಿಟೆಕ್ ಚಿನ್ನದ ಪದಕ ವಿಜೇತ, ಆನಂದ್ ಕುಮಾರ್ ಅವರು ಮೃತಪಟ್ಟ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. 


ಗೋವಿಂದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗುಜೈನಿಯಲ್ಲಿರುವ ಬಾಡಿಗೆ ಮನೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.

ಆನಂದ್ ಅವರು ತಂದೆಗೆ ಉದ್ದೇಶಿಸಿ ಬರೆದ ಐದು ಸಾಲಿನ ಪತ್ರದಲ್ಲಿ, 'ಕ್ಷಮಿಸಿ ಅಪ್ಪಾ, ನಾನು 50 ಬಾರಿ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸಿದೆ. ಆದರೆ ನನಗೆ ಸಾಧ್ಯವಾಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ' ಎಂದು ಬರೆದಿದ್ದಾರೆ. ಪತ್ರದಲ್ಲಿ 'ಕ್ಷಮಿಸಿ' ಎಂಬ ಪದವನ್ನು ಏಳರಿಂದ ಎಂಟು ಬಾರಿ ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮನೆಕೆಲಸದಾಕೆ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಬೀಗ ಹಾಕಿರುವುದನ್ನು ಗಮನಿಸಿದ್ದಾರೆ. ಹಲವು ಬಾರಿ ಕರೆದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ, ಆನಂದ್ ಅವರ ಮೃತದೇಹವು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು ಎಂದು ತಿಳಿದು ಬಂದಿದೆ.

ಘಟನೆ ನಡೆದ ಸಂದರ್ಭದಲ್ಲಿ ಆನಂದ್ ಅವರ ತಂದೆ ರಾಜ್‌ಕುಮಾರ್ ಹಾಗೂ ಅಜ್ಜ, ಹಿರಿಯ ಮಗನ ವಿವಾಹ ನಿಶ್ಚಯಕ್ಕಾಗಿ ಬಿಹಾರಕ್ಕೆ ತೆರಳಿದ್ದರು ಎನ್ನಲಾಗಿದೆ.

ಬಿಹಾರದ ಬಕ್ಸಾರ್ ಮೂಲದ ರಾಜ್‌ಕುಮಾರ್ ಅವರು ಲೋಹಿಯಾ ಪ್ರೈವೇಟ್ ಲಿಮಿಟೆಡ್‌ನ ನಿವೃತ್ತ ಉದ್ಯೋಗಿಯಾಗಿದ್ದು, ಅವರಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ. ರಾಜ್‌ಕುಮಾರ್ ಹಾಗೂ ಆನಂದ್ ಗುಜೈನಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆನಂದ್ ಅವರ ಸಹೋದರ ಬಿಹಾರದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ.

ರಾಜ್‌ಕುಮಾರ್ ಐದು ದಿನಗಳ ಹಿಂದೆ ಬಿಹಾರಕ್ಕೆ ತೆರಳಿದ್ದು, ಆನಂದ್ ಕೂಡ ಅವರೊಂದಿಗೆ ತೆರಳಬೇಕಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರು ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆನಂದ್ ಅವರು 2024ರಲ್ಲಿ ಕಾನ್ಪುರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ ನಲ್ಲಿ ಬಿಟೆಕ್ ಪದವಿ ಪೂರ್ಣಗೊಳಿಸಿದ್ದರು. ರಾಜ್ಯದಲ್ಲಿ ಮೂರನೇ ರ‍್ಯಾಂಕ್ ಪಡೆದಿದ್ದ ಅವರು, 2024ರ ಆಗಸ್ಟ್‌ 13ರಂದು ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರಿಂದ ಚಿನ್ನದ ಪದಕ ಸ್ವೀಕರಿಸಿದ್ದರು.

ಪದವಿ ಪೂರ್ಣಗೊಳಿಸಿದ ಬಳಿಕ ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಇದೇ ವೇಳೆ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗವನ್ನೂ ಪಡೆದಿದ್ದರು. ಆದರೆ ಪದೇ ಪದೇ ಪರೀಕ್ಷೆಗಳಲ್ಲಿ ವಿಫಲವಾಗುತ್ತಿದ್ದ ಕಾರಣ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗೋವಿಂದ್ ನಗರ ಠಾಣೆಯ ಎಸ್‌ಎಚ್‌ಒ ಅಶೋಕ್ ಕುಮಾರ್ ದುಬೆ ಅವರ ಪ್ರಕಾರ, ಕೊಠಡಿಯಿಂದ ಐದು ಸಾಲಿನ ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಪತ್ರದಲ್ಲಿ 'ಕ್ಷಮಿಸಿ' ಎಂಬ ಪದವನ್ನು ಏಳರಿಂದ ಎಂಟು ಬಾರಿ ಬರೆದಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಸರ್ಕಾರಿ ಉದ್ಯೋಗ ಪಡೆಯಲು ನಡೆಸಿದ ನಿರಂತರ ಪ್ರಯತ್ನಗಳು ವಿಫಲವಾದ ಕಾರಣ ಉಂಟಾದ ಖಿನ್ನತೆಯಿಂದ ಆನಂದ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries