ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನಲ್ಲಿ ಮೊದಲ ಬಾರಿಗೆ ಎಚ್-5 ಹಕ್ಕಿ ಜ್ವರ ಸೋಂಕು ಪತ್ತೆಯಾಗಿದೆ. ವೆಲ್ಲಿಂಗ್ಟನ್‌ನ ಪೆಟೋನ್ ಬೀಚ್‌ನಲ್ಲಿ ಸತ್ತ ಸ್ಥಿತಿಯಲ್ಲಿ ಕಂಡುಬಂದ ಬ್ರೌನ್ ಸ್ಕುವಾ ಎಂಬ ವಲಸೆ ಸಮುದ್ರಪಕ್ಷಿಯಲ್ಲಿ ಈ ವೈರಸ್ ದೃಢಪಟ್ಟಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈ ಹಕ್ಕಿ ಜ್ವರವು ವಿಶ್ವದಾದ್ಯಂತ ಕೋಳಿಗಳು ಮತ್ತು ಕಾಡು ಪಕ್ಷಿಗಳಲ್ಲಿ ತೀವ್ರ ಅನಾರೋಗ್ಯ ಮತ್ತು ಹೆಚ್ಚಿನ ಸಾವಿಗೆ ಕಾರಣವಾದ ವೈರಸ್ ಆಗಿದೆ.
'ಪೆಟ್ರೋನ್ ಬೀಚ್‌ನಲ್ಲಿ ಪತ್ತೆಯಾದ ಬ್ರೌನ್ ಸ್ಕುವಾ ಪಕ್ಷಿಯಲ್ಲಿ ಎಚ್-5 ಹಕ್ಕಿ ಜ್ವರ ದೃಢಪಟ್ಟಿರುವುದರಿಂದ ನ್ಯೂಜಿಲೆಂಡ್‌ನ ಜನರು ಎಚ್ಚರಿಕೆಯಿಂದಿರಬೇಕು' ಎಂದು ದೇಶದ ಜೈವಿಕ ಭದ್ರತಾ ಸಚಿವ ಆಂಡ್ರೂ ಹಾಗಾರ್ಡ್ ತಿಳಿಸಿದ್ದಾರೆ.
ಸದ್ಯಕ್ಕೆ ಈ ವೈರಸ್ ಕಾಡು ಪಕ್ಷಿಗಳ ನಡುವೆ ಹರಡಿರುವ ಯಾವುದೇ ಸಾಕ್ಷ್ಯಗಳಿಲ್ಲ. ಹಾಗೆಯೇ ಕಾಡು ಜೀವಿಗಳಲ್ಲಿ ಸಾಮೂಹಿಕ ಸಾವಿನ ಪ್ರಕರಣಗಳೂ ವರದಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಸರ್ಕಾರ ದೇಶದ ಅಪರೂಪದ ಐದು ಹಕ್ಕಿ ಪ್ರಭೇದಗಳಾದ ಕಾಕಾಪೋ, ಟಕಾಹೇ, ಶೋರ್ ಪ್ಲೋವರ್, ಬ್ಲ್ಯಾಕ್ ಸ್ಟಿಲ್ಟ್ ಹಾಗೂ ಆರೆಂಜ್-ಫ್ರಾಂಟೆಡ್ ಪ್ಯಾರಕೀಟ್ ಪಕ್ಷಿಗಳ ಸಂಕುಲವನ್ನು ರಕ್ಷಿಸಲು ಸಂತಾನೋತ್ಪತ್ತಿ ಕೇಂದ್ರಗಳಲ್ಲಿರುವ ಪಕ್ಷಿಗಳಿಗೆ ಲಸಿಕೆ ನೀಡುತ್ತಿದೆ.
ಮೂರು ಅಥವಾ ಅದಕ್ಕಿಂತ ಹೆಚ್ಚು ಅನಾರೋಗ್ಯ ಪೀಡಿತ ಅಥವಾ ಸತ್ತ ಪಕ್ಷಿಗಳು ಒಂದೇ ಸ್ಥಳದಲ್ಲಿ ಕಂಡುಬಂದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ಮಾನವರ ಆಗಮನಕ್ಕೂ ಮುನ್ನ ನ್ಯೂಜಿಲೆಂಡ್ ಸಂಪೂರ್ಣವಾಗಿ ಸಸ್ತನಿ ಮುಕ್ತ ಪ್ರದೇಶವಾಗಿತ್ತು. 'ಕಿವಿ' ಸೇರಿದಂತೆ ಅಲ್ಲಿನ ವಿಶಿಷ್ಟ ಪಕ್ಷಿಗಳಿಗೆ ಹಾರುವ ಸಾಮರ್ಥ್ಯವೇ ಇರಲಿಲ್ಲ ಎಂಬುದು ಗಮನ ಸೆಳೆದಿದೆ.

