ನ್ಯೂಜೆರ್ಸಿ: ಸುಮಾರು ಐದು ವಾರಗಳಿಂದ ವಿಶ್ವದಾದ್ಯಂತ ಫುಟ್ಬಾಲ್ ಅಭಿಮಾನಿಗಳನ್ನು ರಂಜಿಸಿರುವ ಫಿಫಾ ವಿಶ್ವಕಪ್ ಟೂರ್ನಿಯು ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೆಟ್ಲೈಫ್ ಸ್ಟೇಡಿಯಮ್ನಲ್ಲಿ ಭಾರತದ ಕಾಲಮಾನ ಇಂದು ರವಿವಾರ ರಾತ್ರಿ 12:30ಕ್ಕೆ ಆರಂಭವಾಗಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಯುರೋಪಿಯನ್ ಚಾಂಪಿಯನ್ ಸ್ಪೇನ್ ತಂಡವು ಹಾಲಿ ವಿಶ್ವ ಹಾಗೂ ದಕ್ಷಿಣ ಅಮೆರಿಕದ ಚಾಂಪಿಯನ್ ಅರ್ಜೆಂಟೀನ ತಂಡವನ್ನು ಎದುರಿಸಲಿದೆ.
ಪ್ರಶಸ್ತಿ ಫೇವರಿಟ್ ಫ್ರಾನ್ಸ್ ತಂಡವನ್ನು ಮಣಿಸಿದ ಸ್ಪೇನ್ ತಂಡವು 2010ರ ನಂತರ ಮೊದಲ ಬಾರಿ ಫೈನಲ್ಗೆ ತಲುಪಿದ್ದು, ಎರಡನೇ ಪ್ರಶಸ್ತಿಯ ಕನಸು ಕಾಣುತ್ತಿದೆ. ಮತ್ತೊಂದೆಡೆ ಅರ್ಜೆಂಟೀನ ತಂಡವು ಇಂಗ್ಲೆಂಡ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿ ಹಾಗೂ ಒಟ್ಟಾರೆ ಏಳನೇ ಬಾರಿ ಫೈನಲ್ಗೆ ತಲುಪಿದ್ದು, ಸತತ ಪ್ರಶಸ್ತಿಯನ್ನು ಗೆದ್ದ ಮೂರನೇ ದೇಶ ಎನಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಸಹ ಆತಿಥ್ಯ ದೇಶಗಳಾದ ಕೆನಡಾ, ಮೆಕ್ಸಿಕೊ ಹಾಗೂ ಅಮೆರಿಕ, ಬಲಿಷ್ಠ ತಂಡಗಳಾದ ಬ್ರೆಝಿಲ್ ಹಾಗೂ ಜರ್ಮನಿ ಸೇರಿದಂತೆ 46 ತಂಡಗಳು ಟೂರ್ನಿಯಿಂದ ಈಗಾಗಲೆ ನಿರ್ಗಮಿಸಿವೆ. ಒಟ್ಟು 48 ತಂಡಗಳು ಭಾಗವಹಿಸಿದ್ದ ಅತಿ ದೊಡ್ಡ ಟೂರ್ನಿಯಲ್ಲಿ ಅರ್ಜೆಂಟೀನ ಹಾಗೂ ಸ್ಪೇನ್ ತಂಡಗಳು ಮಾತ್ರ ಕಣದಲ್ಲಿ ಉಳಿದುಕೊಂಡಿವೆ.
ಸುಮಾರು ಎರಡು ದಶಕಗಳ ನಂತರ ಲಿಯೊನೆಲ್ ಮೆಸ್ಸಿ ಹಾಗೂ ಯಮಲ್ 2026ರ ವಿಶ್ವಕಪ್ ಫೈನಲ್ನಲ್ಲಿ ಸೆಣಸಾಡುತ್ತಿದ್ದಾರೆ. 2007ರಲ್ಲಿ ಮೆಸ್ಸಿ ಅವರು ಆರು ತಿಂಗಳ ಮಗು ಯಮಲ್ರನ್ನು ಚಾರಿಟಿ ಕಾರ್ಯಕ್ರಮದಲ್ಲಿ ಫೋಟೊಶೂಟ್ಗಾಗಿ ವಾಟರ್ಟಬ್ನಲ್ಲಿಟ್ಟು ಸ್ನಾನ ಮಾಡಿಸಿದ್ದರು. ಈ ಫೋಟೊ ಇದೀಗ ವೈರಲ್ ಆಗಿದೆ.
ಹೆಡ್-ಟು-ಹೆಡ್
ಸ್ಪೇನ್ ಹಾಗೂ ಅರ್ಜೆಂಟೀನ ತಂಡಗಳು ವಿಶ್ವಕಪ್ನಲ್ಲಿ ಈ ತನಕ ಏಕೈಕ ಪಂದ್ಯವನ್ನಾಡಿವೆ. 1966ರಲ್ಲಿ ಇಂಗ್ಲೆಂಡ್ನಲ್ಲಿ ನಡೆದಿದ್ದ ಗ್ರೂಪ್ ಪಂದ್ಯದಲ್ಲಿ ಅರ್ಜೆಂಟೀನ ತಂಡವು 2-1 ಅಂತರದಿಂದ ಜಯಶಾಲಿಯಾಗಿತ್ತು. ಇದು ಉಭಯ ತಂಡಗಳು ಆಡಿರುವ ಏಕೈಕ ಅಧಿಕೃತ ಪಂದ್ಯವಾಗಿದೆ. ಈ ಎರಡು ತಂಡಗಳು ಹಲವು ವರ್ಷಗಳಿಂದ 14 ಬಾರಿ ಸೌಹಾರ್ದ ಪಂದ್ಯಗಳನ್ನು ಆಡಿವೆ. ಈ ಪೈಕಿ ಸ್ಪೇನ್ ಆರರಲ್ಲಿ ಜಯ ಸಾಧಿಸಿದರೆ, ಅರ್ಜೆಂಟೀನ 6ರಲ್ಲಿ ಗೆದ್ದಿದೆ. ಎರಡು ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು.
ಎರಡು ದಶಕಗಳಿಂದ ಅಂತರ್ರಾಷ್ಟ್ರೀಯ ಫುಟ್ಬಾಲ್ ಆಡುತ್ತಿರುವ ಲಿಯೊನೆಲ್ ಮೆಸ್ಸಿ ಕೇವಲ ಮೂರು ಬಾರಿ ಸ್ಪೇನ್ ತಂಡದ ವಿರುದ್ಧ ಆಡಿದ್ದಾರೆ. ಮೆಸ್ಸಿ ಅವರು ಬಾರ್ಸಿಲೋನದಲ್ಲಿ ತನ್ನ ಹೆಚ್ಚಿನ ಕ್ಲಬ್ ವೃತ್ತಿಬದುಕನ್ನು ಕಳೆದಿದ್ದರೂ ಸ್ಪೇನ್ ಎದುರು ಹೆಚ್ಚು ಪಂದ್ಯಗಳನ್ನು ಆಡಿಲ್ಲ. 2009ರ ನವೆಂಬರ್ನಲ್ಲಿ ಮ್ಯಾಡ್ರಿಡ್ನಲ್ಲಿ ಸ್ಪೇನ್ ತಂಡವನ್ನು ಎದುರಿಸಿದ್ದ ಮೆಸ್ಸಿ, ಪೆನಾಲ್ಟಿಯಲ್ಲಿ ಗೋಲು ಗಳಿಸಿದ್ದರು. ಆ ಪಂದ್ಯವನ್ನು ಸ್ಪೇನ್ 2-1ರಿಂದ ಗೆದ್ದುಕೊಂಡಿತ್ತು.
ಯಮಲ್ ಸಹಿತ ಸ್ಪೇನ್ ತಂಡದಲ್ಲಿರುವ ಬಾರ್ಸಿಲೋನದ ಎಂಟು ಆಟಗಾರರು ಕ್ಯಾಂಪ್ನೌನಲ್ಲಿ ಮೆಸ್ಸಿ ಅವರನ್ನು ನೋಡುತ್ತಾ ಬೆಳೆದಿದ್ದಾರೆ. ಈ ಪೈಕಿ ಮಿಡ್ ಫೀಲ್ಡರ್ ಪೆಡ್ರಿ ಅವರು ಮೆಸ್ಸಿಯವರೊಂದಿಗೆ ಕಟಲಾನ್ ಕ್ಲಬ್ ಪರ ಆಡಿದ್ದರು. 2021ರಲ್ಲಿ ಮೆಸ್ಸಿ ಬಾರ್ಸಿಲೋನವನ್ನು ತೊರೆದಾಗ ಯಮಲ್ಗೆ ಕೇವಲ 14 ವರ್ಷ ವಯಸ್ಸಾಗಿತ್ತು.
2018ರಲ್ಲಿ ಕೊನೆಯ ಬಾರಿ ಸೌಹಾರ್ದ ಪಂದ್ಯವನ್ನಾಡಿದ್ದು, ಆ ಪಂದ್ಯದಲ್ಲಿ ಸ್ಪೇನ್ ತಂಡವು ಅರ್ಜೆಂಟೀನವನ್ನು 6-1 ಅಂತರದಿಂದ ಮಣಿಸಿತ್ತು.
ಮೆಟ್ಲೈಫ್ ಸ್ಟೇಡಿಯಂನಲ್ಲಿ ಫೈನಲ್
ಎರಡು ನ್ಯಾಶನಲ್ ಫುಟ್ಬಾಲ್ ಲೀಗ್(ಎನ್ಎಫ್ಎಲ್)ತಂಡಗಳ ತವರು ಮೈದಾನವಾಗಿರುವ ಮೆಟ್ಲೈಫ್ ಸ್ಟೇಡಿಯಂನಲ್ಲಿ ವಿಶ್ವಕಪ್ ಫೈನಲ್ ಪಂದ್ಯವು ನಡೆಯಲಿದೆ. ವಿಶ್ವಕಪ್ಗೋಸ್ಕರ ಈ ಮೈದಾನವನ್ನು ನ್ಯೂಯಾರ್ಕ್-ನ್ಯೂಜೆರ್ಸಿ ಸ್ಟೇಡಿಯಂ ಎಂದುಮರು ನಾಮಕರಣ ಮಾಡಲಾಗಿದೆ.
82,500 ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಈ ಸ್ಟೇಡಿಯಂ, 2025ರ ಫಿಫಾ ಕ್ಲಬ್ ವಿಶ್ವಕಪ್ ಫೈನಲ್ ಹಾಗೂ ಎರಡೂ ಸೆಮಿ ಫೈನಲ್ ಪಂದ್ಯಗಳ ಆತಿಥ್ಯವಹಿಸಿದೆ.
ಟೂರ್ನಿಯಲ್ಲಿ ಗರಿಷ್ಠ ಗೋಲು ಗಳಿಸಿರುವ ಅರ್ಜೆಂಟೀನ
ಅರ್ಜೆಂಟೀನ ತಂಡವು ಪ್ರಸಕ್ತ ವಿಶ್ವಕಪ್ ಪಂದ್ಯಾವಳಿಯಲ್ಲಿ ಗರಿಷ್ಠ ಗೋಲುಗಳನ್ನು(19)ಕಲೆ ಹಾಕಿದೆ. ನಾಲ್ಕು ವರ್ಷಗಳ ಹಿಂದೆ 2022ರ ಖತರ್ ವಿಶ್ವಕಪ್ನಲ್ಲಿ ಆಡಿರುವ ತನ್ನ ಮೊದಲ ಗ್ರೂಪ್ ಪಂದ್ಯದಲ್ಲಿ ಸೌದಿ ಅರೇಬಿಯ ತಂಡದ ವಿರುದ್ಧ 1-2 ಅಂತರದಿಂದ ಸೋತ ನಂತರ ಹಿಂದಿನ 13 ವಿಶ್ವಕಪ್ ಪಂದ್ಯಗಳಲ್ಲಿ ಕನಿಷ್ಠ ಎರಡು ಗೋಲುಗಳನ್ನು ಗಳಿಸಿದೆ. ಸ್ಪೇನ್ ತಂಡವು ಹಲವು ಗೋಲುಗಳ ಅವಕಾಶ ಪಡೆದರೂ ಅರ್ಜೆಂಟೀನಗಿಂತ 6 ಗೋಲು ಕಡಿಮೆ ಗಳಿಸಿದೆ. ಅರ್ಜೆಂಟೀನಗಿಂತ ಕಡಿಮೆ ಗೋಲು ಬಿಟ್ಟುಕೊಟ್ಟಿದೆ. ಆದರೆ ಇತ್ತೀಚೆಗೆ ಬೆಲ್ಜಿಯಮ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 2-1ರಿಂದ ಸೋತ ಪಂದ್ಯದಲ್ಲಿ ಮಾತ್ರ ಗೋಲು ಬಿಟ್ಟುಕೊಟ್ಟಿದೆ.
*ಗೋಲ್ಡನ್ ಬೂಟ್ ಸ್ಪರ್ಧೆ: ವಿಜೇತ ತಂಡವು ಮಿರುಗುವ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಅವಕಾಶ ಪಡೆಯುವುದಲ್ಲದೆ, ಆಟಗಾರರು ವೈಯಕ್ತಿಕ ಸಾಧನೆಗಾಗಿ ಪ್ರಶಸ್ತಿಯನ್ನು ಗೆಲ್ಲಲಿದ್ದಾರೆ.
ಟಾಪ್ ಸ್ಕೋರರ್ಗೆ 'ಗೋಲ್ಡನ್ ಬೂಟ್' ಹಾಗೂ ಪಂದ್ಯಾವಳಿಯ ಶ್ರೇಷ್ಠ ಅಟಗಾರನಿಗೆ 'ಗೋಲ್ಡನ್ ಬಾಲ್' ಸಹಿತ ಐದು ಅಧಿಕೃತ ಟ್ರೋಫಿಗಳನ್ನು ನೀಡಲಾಗುತ್ತದೆ.
'ಗೋಲ್ಡನ್ ಬೂಟ್' ಸ್ಪರ್ಧೆಯಲ್ಲಿ ಮೆಸ್ಸಿ ಅವರು ಫ್ರಾನ್ಸ್ನ ಕೈಲಿಯನ್ ಎಂಬಾಪೆಗಿಂತ ಮುಂದಿದ್ದಾರೆ. ಎಂಬಾಪೆ ಅವರು ಪ್ಲೇ ಆಫ್ ಪಂದ್ಯದಲ್ಲಿ ಆಡಲಿದ್ದಾರೆ. ಎಂಬಾಪೆ ಕಳೆದ ಬಾರಿ 'ಗೋಲ್ಡನ್ ಬೂಟ್' ಪ್ರಶಸ್ತಿ ಗೆದ್ದಿದ್ದರು. ಮೆಸ್ಸಿ ಇದೇ ಮೊದಲ ಬಾರಿ ಈ ಪ್ರಶಸ್ತಿಯ ರೇಸ್ನಲ್ಲಿದ್ದಾರೆ.
ಫಿಫಾ ತಾಂತ್ರಿಕ ಅಧ್ಯಯನ ಗುಂಪು ಗೋಲ್ಡನ್ ಗ್ಲೋವ್, ಯಂಗ್ ಪ್ಲೇಯರ್ ಹಾಗೂ ಫೇಯರ್ ಪ್ಲೇಯರ್ ಪ್ರಶಸ್ತಿಯನ್ನು ಪ್ರದಾನಿಸಲಿದೆ.
ಚಾಂಪಿಯನ್ ತಂಡಕ್ಕೆ ಬಂಪರ್ ಬಹುಮಾನ
ವಿಜೇತ ತಂಡಕ್ಕೆ 50 ಮಿಲಿಯನ್ ಯು.ಎಸ್. ಡಾಲರ್(ಅಂದಾಜು 475 ಕೋ.ರೂ.)ಹಾಗೂ ರನ್ನರ್ ಅಪ್ ತಂಡ 33 ಮಿಲಿಯನ್ ಯು.ಎಸ್.ಡಾಲರ್(ಅಂದಾಜು 315 ಕೋ.ರೂ.)ಬಹುಮಾನವನ್ನು ಗೆಲ್ಲಲಿದೆ.
ವಿಶ್ವಕಪ್ಗೆ ಅರ್ಹತೆ ಪಡೆದ ಪ್ರತಿಯೊಂದು ತಂಡಗಳು ಪೂರ್ವತಯಾರಿ ವೆಚ್ಚದ ಭಾಗವಾಗಿ 1.5 ಮಿ.ಡಾಲರ್ ಪಡೆಯಲಿವೆ.
ಇದೇ ಮೊದಲ ಬಾರಿ ಫಿಫಾವು ವಿಜೇತ ತಂಡದ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿಗೆ ಚಾಂಪಿಯನ್ಶಿಪ್ ರಿಂಗ್ಗಳನ್ನು ನೀಡಲು ನಿರ್ಧರಿಸಿದೆ.
ಸ್ಪೇನ್ ತಂಡದ ಫೈನಲ್ ಹಾದಿ
ಯುರೋ ಚಾಂಪಿಯನ್ ಸ್ಪೇನ್ ತಂಡವು ಚೊಚ್ಚಲ ವಿಶ್ವಕಪ್ ಆಡಿದ ಆಫ್ರಿಕಾದ ಕೇಪ್ವರ್ಡ್ ತಂಡದ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿ ವಿಶ್ವಕಪ್ನಲ್ಲಿ ಆಘಾತಕಾರಿ ಆರಂಭ ಪಡೆದಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಸ್ಪೇನ್ ತಂಡವು ಸೌದಿ ಅರೇಬಿಯವನ್ನು 4-0 ಅಂತರದಿಂದ ಹಾಗೂ ಉರುಗ್ವೆ ತಂಡವನ್ನು 1-0 ಅಂತರದಿಂದ ಮಣಿಸಿ 'ಎಚ್' ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿತ್ತು.
ಅಂತಿಮ-32ರ ಪಂದ್ಯದಲ್ಲಿ ಆಸ್ಟ್ರಿಯಾ ತಂಡವನ್ನು 3-0 ಅಂತರದಿಂದ ಮಣಿಸಿ ತನ್ನ ಉತ್ತಮ ಪ್ರದರ್ಶನ ಮುಂದುವರಿಸಿತು. ಈ ಪಂದ್ಯದಲ್ಲಿ ಒಯರ್ಝಾಬಲ್ ಅವಳಿಗೋಲು ಗಳಿಸಿದ್ದರು.
ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ 1-0 ಅಂತರದಿಂದ ರೋಚಕ ಜಯ ಸಾಧಿಸಿತ್ತು. ಬದಲಿ ಆಟಗಾರ ಮಿಕೆಲ್ ಮೆರಿನೊ 91ನೇ ನಿಮಿಷದಲ್ಲಿ ಗೆಲುವಿನ ಗೋಲು ಗಳಿಸಿದ್ದರು. ಈ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವಕಪ್ನ ವೃತ್ತಿಜೀವನವನ್ನು ಅಂತ್ಯಗೊಳಿಸಿದರು.
ಬೆಲ್ಜಿಯಮ್ ವಿರುದ್ದದ ಕ್ವಾರ್ಟರ್ ಫೈನಲ್ನಲ್ಲಿ ಬದಲಿ ಗೋಲ್ಕೀಪರ್ ಲಾಮೆನ್ಸ್ ಅವರ ತಪ್ಪಿನ ಲಾಭ ಪಡೆದ ಸ್ಪೇನ್ 2-1ರಿಂದ ಗೆಲುವು ಸಾಧಿಸಿತು.ಈ ಪಂದ್ಯದಲ್ಲಿ ಮಾತ್ರ ಗೋಲು ಬಿಟ್ಟುಕೊಟ್ಟಿದೆ. ಡಲ್ಲಾಸ್ನಲ್ಲಿ ನಡೆದ ಸೆಮಿ ಫೈನಲ್ನಲ್ಲಿ ಫ್ರಾನ್ಸ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿದ ಸ್ಪೇನ್ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿತು. 2024ರ ಬ್ಯಾಲನ್ ಡಿ'ಒರ್ ಪ್ರಶಸ್ತಿವಿಜೇತ ರೋಡ್ರಿ ಅವರು ತನ್ನ ತಂಡ ಸಂಪೂಣ ಹಿಡಿತ ಸಾಧಿಸುವಲ್ಲಿ ನೆರವಾದರು. ಯಮಲ್ರ ಪ್ರತಿರೋಧ ಹಾಗೂ ಬುದ್ದಿವಂತಿಕೆಯಿಂದ ಸ್ಪೇನ್ ಪೆನಾಲ್ಟಿ ಅವಕಾಶ ಪಡೆದಿದ್ದು, ಒಯಾರ್ಝಾವಲ್ ಇದನ್ನು ಗೋಲಾಗಿ ಪರಿವರ್ತಿಸಿದರು.
*ಸ್ಟಾರ್ ಆಟಗಾರ: ಹೆಚ್ಚೇನು ಪ್ರಸಿದ್ದಿಯಲ್ಲಿಲ್ಲದ ಸ್ಟ್ರೈಕರ್ ಮಿಕೆಲ್ ಒಯರ್ಝಾಬಲ್ ಸ್ಪೇನ್ನ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅವರು ಪ್ರಸಕ್ತ ಟೂರ್ನಿಯಲ್ಲಿ ಐದು ಗೋಲುಗಳನ್ನು ಗಳಿಸಿ ತನ್ನ ತಂಡವನ್ನು ಫೈನಲ್ಗೆ ತಲುಪಿದ್ದಾರೆ. ಇಂಗ್ಲೆಂಡ್ ವಿರುದ್ಧ ಬರ್ಲಿನ್ನಲ್ಲಿ ನಡೆದಿದ್ದ 2024ರ ಯುರೋ ಫೈನಲ್ ಪಂದ್ಯದಲ್ಲಿ ಸ್ಪೇನ್ ಪರ ಗೆಲುವಿನ ಗೋಲು ಗಳಿಸಿದ್ದರು. ಪ್ರಸಕ್ತ ವಿಶ್ವಕಪ್ನ ನಾಕೌಟ್ ಹಂತದಲ್ಲಿ ಮೂರು ಗೋಲುಗಳನ್ನು ಗಳಿಸಿದ್ದಾರೆ.
ಯುವ ಆಟಗಾರ ಯಮಲ್ ಸ್ಪೇನ್ನ ದಾಳಿಗೆ ಕಿಚ್ಚು ಹೊತ್ತಿಸುತ್ತಿದ್ದಾರೆ. ರೋಡ್ರಿ ಅವರು ಅತ್ಯಂತ ಪ್ರಮುಖ ಆಟಗಾರನಾಗಿದ್ದಾರೆ. ಪ್ರತೀ ಪಂದ್ಯದ ಒತ್ತಡದ ಪರಿಸ್ಥಿತಿಯಲ್ಲಿ ರೊಡ್ರೊ ಅವರು 47 ಪಾಸ್ಗಳನ್ನು ಪೂರ್ಣಗೊಳಿಸಿದ್ದಾರೆಂದು ಫಿಫಾ ಡೇಟಾ ತಿಳಿಸಿದೆ. ಇದು ಟೂರ್ನಿಯಲ್ಲಿ ಆಟಗಾರನ ಶ್ರೇಷ್ಠ ನಿರ್ವಹಣೆಯಾಗಿದೆ.
ಅರ್ಜೆಂಟೀನ ತಂಡದ ಫೈನಲ್ ಹಾದಿ
ಅರ್ಜೆಂಟೀನ ತಂಡದ ವಿಶ್ವಕಪ್ ಫೈನಲ್ ಹಾದಿ ಅಷ್ಟೇನು ಕಷ್ಟಕರವಾಗಿಲಿಲ್ಲ. ಸೆಮಿ ಫೈನಲ್ನಲ್ಲಿ ನಾಲ್ಕನೇ ರ್ಯಾಂಕಿನ ಇಂಗ್ಲೆಂಡ್ ತಂಡವನ್ನು ಎದುರಿಸುವ ತನಕ ಫಿಫಾ ವಿಶ್ವ ರ್ಯಾಂಕಿಂಗ್ನಲ್ಲಿ ಟಾಪ್-15ರಲ್ಲಿರುವ ತಂಡಗಳನ್ನು ಅದು ಎದುರಿಸಲಿಲ್ಲ. ಗ್ರೂಪ್ ಹಂತದಲ್ಲಿ ಅಲ್ಜೀರಿಯಾ, ಆಸ್ಟ್ರಿಯಾ ಹಾಗೂ ಜೋರ್ಡಾನ್ ತಂಡಗಳನ್ನು ಎದುರಿಸಿತು.
ಆದರೆ ಕೇಪ್ ವರ್ಡ್ ತಂಡವು ಅಂತಿಮ-32ರ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನ ತಂಡದ ಬೆವರಿಳಿಸಿತ್ತು. ಅರ್ಜೆಂಟೀನವು ಹೆಚ್ಚುವರಿ ಸಮಯದಲ್ಲಿ 3-2 ಅಂತರದಿಂದ ಜಯಶಾಲಿಯಾಗಿತ್ತು.ಅಂತಿಮ-16ರ ಪಂದ್ಯದಲ್ಲಿ ಈಜಿಪ್ಟ್ ತಂಡದ ವಿರುದ್ಧ 0-2ರಿಂದ ಚೇತರಿಸಿಕೊಂಡು ಅಂತಿಮವಾಗಿ 3-2ರಿಂದ ರೋಚಕ ಜಯ ಗಳಿಸಿತ್ತು. ವಿಎಆರ್ ನಿರ್ಧಾರದಿಂದ ತನಗೆ ಅನ್ಯಾಯವಾಗಿದೆ ಎಂದು ಈಜಿಪ್ಟ್ ತಂಡ ಆರೋಪಿಸಿತ್ತು.
ಕ್ವಾರ್ಟರ್ ಫೈನಲ್ನಲ್ಲಿ ಸ್ವಿಟ್ಸರ್ಲ್ಯಾಂಡ್ ವಿರುದ್ಧ ಪ್ರಯಾಸಕಾರಿ ಗೆಲುವು ಪಡೆದಿತ್ತು. ಬ್ರೀಲ್ ಎಂಬೊಲೊ ರೆಡ್ ಕಾರ್ಡ್ ಪಡೆದ ಕಾರಣ ಅರ್ಜೆಂಟೀನದ ಗೆಲುವಿನ ಹಾದಿ ಸುಗಮವಾಯಿತು. ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ನಲ್ಲಿ ಕೊನೆಯ ಕ್ಷಣದಲ್ಲಿ ಎರಡು ಗೋಲುಗಳನ್ನು ಗಳಿಸಿದ್ದ ಅರ್ಜೆಂಟೀನ ಫೈನಲ್ಗೆ ಲಗ್ಗೆ ಇಟ್ಟಿತ್ತು.
*ಸ್ಟಾರ್ ಆಟಗಾರ: ಅರ್ಜೆಂಟೀನ ತಂಡವು 2022ರಲ್ಲಿ ಖತರ್ನಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ನೀಡಿದ್ದ ಪ್ರದರ್ಶನವನ್ನು ಮುಂದುವರಿಸಲು ಲಿಯೊನೆಲ್ ಮೆಸ್ಸಿ ನೇತೃತ್ವವಹಿಸಿದ್ದಾರೆ. ಮೆಸ್ಸಿ ಈ ವಿಶ್ವಕಪ್ನಲ್ಲಿ ಆಡುವ ಕುರಿತು ಸಂಶಯವಿದ್ದವು. ಆ ಎಲ್ಲ ಅನುಮಾನವನ್ನು ನಿವಾರಿಸಿದ ಮೆಸ್ಸಿ ವಿಶ್ವಕಪ್ನಲ್ಲಿ ಒಟ್ಟು 8 ಗೋಲುಗಳನ್ನು ಗಳಿಸಿದ್ದಲ್ಲದೆ, ನಾಲ್ಕು ಅಸಿಸ್ಟ್ ಮಾಡಿದ್ದಾರೆ. ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ಫ್ರಾನ್ಸ್ನ ಕೈಲಿಯನ್ ಎಂಬಾಪೆಯೊಂದಿಗೆ ಸಮಬಲ ಸಾಧಿಸಿದ್ದಾರೆ. ಸೆಮಿ ಫೈನಲ್ನಲ್ಲಿ ಮೆಸ್ಸಿ ನೆರವಿನಿಂದ ಲೌಟಾರೊ ಮಾರ್ಟಿನೆಝ್ ಹಾಗೂ ಎಂರೊ ಫೆರ್ನಾಂಡಿಝ್ ಗೋಲು ಗಳಿಸಿದ್ದರು. ಲೌಟಾರೊ ಈ ಟೂರ್ನಿಯಲ್ಲಿ ಮೂರು ಗೋಲುಗಳನ್ನು ಗಳಿಸಿದರೆ, ಎಂರೊ ಅವರು ಇಂಗ್ಲೆಂಡ್ ವಿರುದ್ಧ 2-1 ಅಂತರದಿಂದ ಗೆದ್ದ ಪಂದ್ಯದಲ್ಲಿ ಅವಳಿ ಗೋಲುಗಳನ್ನು ಗಳಿಸಿದ್ದರು. ಸ್ಟಾರ್ ಆಟಗಾರ ಮೆಸ್ಸಿ ಫುಟ್ಬಾಲ್ನ ಅತಿದೊಡ್ಡ ವೇದಿಕೆಯಲ್ಲಿ ವಿದಾಯ ಹೇಳುವ ನಿರೀಕ್ಷೆ ಇದೆ.
ಅರ್ಜೆಂಟೀನ ಟೂರ್ನಿಯಲ್ಲಿ ಗಳಿಸಿರುವ 19 ಗೋಲುಗಳ ಪೈಕಿ ಮೆಸ್ಸಿ 12 ಗೋಲುಗಳನ್ನು ಗಳಿಸಲು ನೆರವಾಗಿ ಈಗಲೂ ಮ್ಯಾಚ್ ವಿನ್ನರ್ ಆಗಿದ್ದಾರೆ.

