ನವದೆಹಲಿ: ಭಾರತೀಯ ರೈಲ್ವೆಯು ಆಧುನೀಕರಣದ ದಿಸೆಯಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿ ನಾವಿನ್ಯತೆ ಪಡೆದುಕೊಳ್ಳುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಅಮೃತ್ ಭಾರತ್ ನಿಲ್ದಾಣ ಯೋಜನೆ ಅಡಿಯಲ್ಲಿ ದೇಶದ 20 ರಾಜ್ಯಗಳಲ್ಲಿ ನವೀಕರಿಸಲಾದ 75 ರೈಲ್ವೆ ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಿದ್ದಾರೆ.
ಒಟ್ಟು ₹1,570 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ನಿಲ್ದಾಣಗಳು, ಭಾರತದ ಶ್ರೀಮಂತ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಾರುವುದರ ಜತೆಗೆ ವಿಶ್ವ ದರ್ಜೆಯ ನಲ್ದಾಣಗಳನ್ನು ನಿರ್ಮಿಸುವ ಸರ್ಕಾರದ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಉದ್ಘಾಟನೆಯಾಗಿರವ ಪ್ರಮುಖ ನಿಲ್ದಾಣಗಳಲ್ಲಿ ಪಂಜಾಬ್ನ 110 ವರ್ಷ ಹಳೆಯ ಜಲಂಧರ್ ಕ್ಯಾಂಪ್ ರೈಲ್ವೆ ನಿಲ್ದಾಣವೂ ಒಂದಾಗಿದೆ. ₹125 ಕೋಟಿ ವೆಚ್ಚದಲ್ಲಿ ಇದನ್ನು ಅಭಿವೃದ್ಧಿ ಮಾಡಲಾಗಿದ್ದು, ಸ್ಥಳೀಯ ಐತಿಹಾಸಿಕ ಗುರುತನ್ನು ಉಳಿಸಿಕೊಂಡು ಪ್ರಯಾಣಿಕರಿಗೆ ವಿಮಾನ ನಿಲ್ದಾಣದಂತಹ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಈ ನಿಲ್ದಾಣವು ಈಗ ಆಧುನಿಕ ಸ್ಟೀಲ್ ಪ್ಲಾಟ್ಫಾರ್ಮ್ ರೂಫಿಂಗ್, ಜಾರದಂತಹ ನೆಲಹಾಸು, ದಕ್ಷತೆಯ ಎಲ್ಇಡಿ ದೀಪಗಳು, ವಿಶಾಲವಾದ ಮೇಲ್ಸೇತುವೆಗಳು, ಸುಧಾರಿತ ಪಾರ್ಕಿಂಗ್ ಸೌಲಭ್ಯ ಮತ್ತು ಪ್ರಯಾಣಿಕರಿಗೆ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮೋದಿ ನಗರ (ದೆಹಲಿ ಎನ್ಸಿಆರ್), ಹೈ-ಟೆಕ್ ಸಿಟಿ (ಹೈದರಾಬಾದ್), ಶಾಮ್ಲಿ, ಕಲ್ಕಾ, ಬಾಲಾಘಾಟ್ ಜಂಕ್ಷನ್, ಮಜ್ಬತ್, ಬಾರಾಮತಿ, ರಾಯನಪಾಡು ಮತ್ತು ಸಂಬಲ್ಪುರ ಸೇರಿದಂತೆ ಹಲವು ನಿಲ್ದಾಣಗಳಿಗೆ ಹೊಸ ಕಾಯಕಲ್ಪ ನೀಡಲಾಗಿದೆ. ಇಲ್ಲಿನ ಸ್ಥಳೀಯ ವಾಸ್ತುಶಿಲ್ಪ ಶೈಲಿಯನ್ನು ಆಧುನಿಕ ಸೌಲಭ್ಯಗಳೊಂದಿಗೆ ಸಂಯೋಜಿಸಿರುವುದು ವಿಶೇಷ.
ಮೇಲ್ದರ್ಜೆಗೇರಿಸಲಾದ ಮೂಲಸೌಕರ್ಯಗಳಲ್ಲಿ ಪ್ರಮುಖವಾಗಿ ಲಿಫ್ಟ್ಗಳು ಮತ್ತು ಎಸ್ಕಲೇಟರ್ಗಳು, ಲಾಂಜ್ಗಳು ಮತ್ತು ಸುಧಾರಿತ ವಿಶ್ರಾಂತಿ ಕೊಠಡಿಗಳು, ಡಿಜಿಟಲ್ ಮಾಹಿತಿ, ಆಧುನಿಕ ಶೌಚಾಲಯ ಮತ್ತು ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ, ಅಂಗವಿಕಲರ ಸ್ನೇಹಿ ಸೌಕರ್ಯಗಳನ್ನು ಈ ನಿಲ್ದಾಣಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ದೇಶದ ಎಲ್ಲ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ 2022ರ ಡಿಸೆಂಬರ್ನಲ್ಲಿ ಅಮೃತ್ ಭಾರತ್ ನಿಲ್ದಾಣ ಯೋಜನೆಯನ್ನು ಜಾರಿ ಮಾಡಲಾಯಿತು. ದೇಶದಾದ್ಯಂತ 1,340ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಗಾಗಿ ಗುರುತಿಸಲಾಗಿದ್ದು ಈ ಪೈಕಿ 122 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈ ಮಹತ್ವಾಕಾಂಕ್ಷೆ ಯೋಜನೆಗೆ ₹71,000 ಕೋಟಿ ಮೀಸಲಿಡಲಾಗಿದ್ದು ಇದು ವಿಶ್ವದ ಅತಿ ದೊಡ್ಡ ರೈಲ್ವೆ ನಿಲ್ದಾಣ ಪುನರ್ಅಭಿವೃದ್ಧಿ ಉಪಕ್ರಮಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಕೊಪ್ಪಳ, ಬಂಟ್ವಾಳ (ದಕ್ಷಿಣ ಕನ್ನಡ), ಅಳ್ನಾವರ (ಧಾರವಾಡ) ಬಾದಾಮಿ (ಬಾಗಲಕೋಟೆ) ರೈಲು ನಿಲ್ದಾಣಗಳನ್ನು ವಿಶ್ವ ದರ್ಜೆಗೆ ಅಭಿವೃದ್ಧಿಪಡಿಸಲಾಗಿದೆ.
ಸ್ಥಳೀಯ ಕಲೆಗೆ ಪ್ರೋತ್ಸಾಹ: ಈ ಯೋಜನೆ 'ಒಂದು ನಿಲ್ದಾಣ ಒಂದು ಉತ್ಪನ್ನ' ಕಾರ್ಯಕ್ರಮದ ಮೂಲಕ ಸ್ಥಳೀಯ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ಅಭಿವೃದ್ಧಿಪಡಿಸಲಾದ ರೈಲು ನಿಲ್ದಾಣಗಳಲ್ಲಿ ಪ್ರಾದೇಶಿಕ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
ನರೇಂದ್ರ ಮೋದಿ ಅವರು ಅಮೃತ್ ಭಾರತ್ ನಿಲ್ದಾಣ ಯೋಜನೆ, ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು, ರೈಲ್ವೆ ಕಾರಿಡಾರ್ಗಳು ಮತ್ತು ವಿದ್ಯುದ್ದೀಕರಣದಂತಹ ಉಪಕ್ರಮಗಳ ಮೂಲಕ ಭಾರತೀಯ ರೈಲ್ವೆಯ ಪರಿವರ್ತನೆಗೆ ಮುಂದಾಗಿದ್ದಾರೆ. ಫೆಬ್ರವರಿ 2024ರಲ್ಲಿ 554 ರೈಲ್ವೆ ನಿಲ್ದಾಣಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಅವರು 2025ರಲ್ಲಿ 18 ರಾಜ್ಯಗಳಲ್ಲಿ 103 ನವೀಕೃತ ನಿಲ್ದಾಣಗಳನ್ನು ಉದ್ಘಾಟಿಸಿದ್ದರು.
ಈ ಬೃಹತ್ ಯೋಜನೆಯು ರೈಲು ನಿಲ್ದಾಣಗಳನ್ನು ಸುಧಾರಿಸುವುದು ಮತ್ತು ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವ ಜತೆಗೆ ಭವಿಷ್ಯದಲ್ಲಿ ಭಾರತದ ಸಾರಿಗೆ ಜಾಲವನ್ನು ಬಲಪಡಿಸುವುದು ಅಮೃತ್ ಭಾರತ್ ನಿಲ್ದಾಣ ಯೋಜನೆಯ ಮುಖ್ಯ ಉದ್ದೇಶ.

