ಉಪ್ಪಳ: ಹಿಂದೂ ಕಾರ್ಯಕರ್ತನ ಮೃತ ದೇಹವನ್ನು ಮುಸ್ಲಿಂ ಮಹಿಳೆ ನೇತೃತ್ವದಲ್ಲಿ ಸಂಸ್ಕರಿಸಲಾಯಿತೆಂಬ ವರದಿಗಳ ಹಿನ್ನೆಲೆಯಲ್ಲಿ ಸ್ಪಷ್ಟೀಕರಣದೊಂದಿಗೆ ಕೊಂಡೆಯೂರು ಆಶ್ರಮದ ಸ್ವಾಮೀಜಿ ಹಾಗೂ ಮಂಗಲ್ಪಾಡಿ ಸೇವಾ ಭಾರತಿ ರಂಗಕ್ಕಿಳಿದಿದೆ. ಕೊಂಡೆಯೂರು ಆಶ್ರಮದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾಧ್ಯಮದ ಮುಂದೆ ಮಾತನಾಡಿದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿಯವರು ಮೃತ ನಾರಾಯಣರ ಮೃತದೇಹವನ್ನು ಸಂಸ್ಕರಿಸಲು ಶೇಖ್ ಜಾಯಿದ್ ವೃದ್ಧಾಶ್ರಮದ ಸಂಚಾಲಕರಾದ ಇಕ್ಬಾಲ್ ಅವರು ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಆಶ್ರಮದ ಕಡೆಯಿಂದ ಮಂಗಲ್ಪಾಡಿ ಸೇವಾ ಭಾರತಿಯ ಅಧ್ಯಕ್ಷ ರಘು ಚೆರುಗೋಳಿ ಅವರಿಗೆ ಜವಾಬ್ದಾರಿ ಒಪ್ಪಿಸಲಾಗಿತ್ತು. ಇದರಂತೆ ಜೂನ್ 26 ರಂದು ಮಧ್ಯಾಹ್ನ ಮೃತದೇಹ ತಲುಪುವುದೆಂದು ತಿಳಿಸಿದಾಗ ರಘು ಅವರ ನೇತೃತ್ವದಲ್ಲಿ ಸೇವಾ ಭಾರತಿ ಕಾರ್ಯಕರ್ತರು ಚೆರುಗೋಳಿ ಸ್ಮಶಾನದಲ್ಲಿ ಚಿತೆ ವ್ಯವಸ್ಥೆ ಮಾಡಿದರು. ಆದರೆ ಮೃತದೇಹ ತಲುಪಲು ವಿಳಂಬವಾದ ಕಾರಣ ಉಳಿದ ಕಾರ್ಯಕರ್ತರು ತೆರಳಿದ್ದರು. ತಿಳಿಸಿದ ಸಮಯಕ್ಕಿಂತ ತಡವಾಗಿ ಬಂದ ಮೃತದೇಹವನ್ನು ಸ್ವೀಕರಿಸಿ ಹಿಂದೂ ಸಂಪ್ರದಾಯದಂತೆ ರಘು ಅವರು ಚಿತೆಗೇರಿಸಿ ಅಗ್ನಿಸ್ಪರ್ಷ ಮಾಡಿ ಅಂತ್ಯ ವಿಧಿ ನೇರವೇರಿಸಿದ್ದರು. ಈ ಅಂತ್ಯ ಕ್ರಿಯೆಯಲ್ಲಿ ಶೇಖ್ ಜಾಯಿದ್ ವೃದ್ಧಾಶ್ರಮಕ್ಕಾಗಲೀ, ಇತರ ಮುಸ್ಲಿಂ ಸಂಘಟನೆಗಳಿಗಾಗಲಿ, ಮತೀಯ ನಾಯಕರಿಗಾಗಲೀ ಪಾತ್ರವಿಲ್ಲ ಎಂದು ತಿಳಿಸಿದರು.
ಇದು ವೃದ್ಧಾಶ್ರಮದ ಕೋರಿಕೆ ಮೇರೆಗೆ ಕೊಂಡೊವೂರು ಆಶ್ರಮದ ನಿರ್ದೇಶನದಂತೆ ಮಂಗಲ್ಪಾಡಿ ಸೇವಾ ಭಾರತಿಯ ನೇತೃತ್ವದಲ್ಲಿ ನಡೆದ ಪ್ರಕ್ರಿಯೆ. ಆದರೆ ಎಲ್ಲೂ ಸೇವಾ ಭಾರತಿಯ ಪಾತ್ರವನ್ನು ಉಲ್ಲೇಖಿಸದೇ, ಜನಪ್ರತಿನಿಧಿಯಾದ ಇರ್ಫಾನ ಅವರೇ ಚಿತೆಯೇರಿಸಿ ಅಗ್ನಿ ಸ್ಪರ್ಶ ಮಾಡಿದರೆಂದು ಸುದ್ದಿಯಾಗಿ ಪ್ರಚಾರ ಪಡೆದದ್ದು ಮಾತ್ರ ವಿಷಾದನೀಯ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಜಿ. ಪಂ. ಸದಸ್ಯೆ ಕೆಲಸಕ್ಕೆ ಸ್ವಾಮೀಜಿ ಪ್ರಶಂಸೆ:
ಇದೇ ವೇಳೆ ಅನಾಥರಾಗಿ ಅಂಗಡಿ ಜಗಲಿಯಲ್ಲಿ ರೋಗ ಪೀಡಿತರಾಗಿದ್ದ ನಾರಾಯಣರನ್ನು ಕರೆದೊಯ್ದು, ತಿಂಗಳ ಕಾಲ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಜಿ. ಪಂ. ಸದಸ್ಯೆ ಇರ್ಫಾನ ಇಕ್ಬಾಲ್ ಅವರ ಸೇವೆಯನ್ನು ಸ್ವಾಮೀಜಿ ಶ್ಲಾಘಿಸಿದರು. ಇದು ಮಾನವೀಯ ದೃಷ್ಟಿಯ ಕರುಣೆಯ ಕಾಯಕ ಎಂದವರು ಪ್ರಶಂಸಿಸಿದರು.
ವಿವಾದ ಇತ್ಯರ್ಥಕ್ಕೆ ಶ್ರೀಗಳ ಕರೆ:
ಮೃತದೇಹ ಸಂಸ್ಕರಿಸಿದ ವಿಷಯದಲ್ಲಿ ಸುದ್ದಿಗಳು ವಿವಾದದತ್ತ ಸಾಗದೇ ರಮ್ಯವಾಗಿ ಇಲ್ಲಿಗೇ ಇತ್ಯರ್ಥದ ಕೊನೆಗಾಣಲಿ ಎಂದು ಶ್ರೀಗಳವರು ಕರೆ ನೀಡಿದರು.
ಉಪ್ಪಳ ಸುತ್ತುಮುತ್ತಲಿನ ಪರಿಸರದಲ್ಲಿ ಹಿಂದೂ-ಮುಸ್ಲಿಂ ಸಮಾಜ ಸಹೃದಯತೆಯಿಂದ ಸೌಹಾರ್ದಯುತವಾಗಿ ನಾಡು ಶಾಂತವಾಗಿದೆ. ಆರೋಪ`- ಪ್ರತ್ಯಾರೋಪ ಬೆಳೆಸಿ ಸಂಬಂಧಗಳು ಹದಗೆಡದಂತೆ ಗಮನಿಸಬೇಕಾಗಿದೆ. ಕೊಂಡೆವೂರು ಆಶ್ರಮದ ನಿರ್ದೇಶನದಂತೆ ಸೇವಾ ಭಾರತಿ ಸ್ಮಶಾನದಲ್ಲಿ ಶವ ಸಂಸ್ಕಾರದ ಏರ್ಪಾಡು ಮಾಡಿ ಅದನ್ನು ನಡೆಸಿರುವಾಗ, ಅವರ ಉಲ್ಲೇಖವಿಲ್ಲದೇ ತಾನೇ ಮಾಡಿದ್ದು ಎಂಬ ರೀತಿಯ ಪ್ರಚಾರ ಉಂಟಾದ್ದರಿಂದ ಸೇವಾ ಭಾರತಿಗೆ ವಿಷಾದವಾಗಿದೆ. ಜತೆಗೆ ಆಶ್ರಮದ ಕರೆ ಮೇರೆಗೆ ನಡೆದ ಕಾಯಕವಾದ್ದರಿಂದ ಈ ಸ್ಪಷ್ಟೀಕರಣ ನೀಡುತ್ತೇವೆಂದು ಸ್ವಾಮೀಜಿ ಹೇಳಿದರು.
ಸೇವಾ ಭಾರತಿ ಸ್ಪಷ್ಟನೆ:
ಚೆರುಗೋಳಿ ಸಾರ್ವಜನಿಕ ಸ್ಮಶಾನಕ್ಕೆ ಗ್ರಾ. ಪಂ ನಿಂದ ಯಾವುದೇ ನೆರವು, ಸೌಲಭ್ಯಗಳಿಲ್ಲ. ಅಲ್ಲಿಗೆ ಹಿಂದೂ ಸಮಾಜದ ಅನಾಥ ಶವಗಳು ಬಂದಾಗ ಅದನ್ನು ಸಂಪ್ರದಾಯ ಬದ್ಧವಾಗಿ ಸಂಸ್ಕರಿಸುವ ಕೆಲಸವನ್ನು ಸೇವಾ ಭಾರತಿ ಮೂರು ದಶಕದಿಂದ ಮಾಡುತ್ತಿದೆ. ಇದು ಯಾರಿಂದಲೂ ಚಿಕ್ಕಾಸು ಪಡೆಯದೇ ಮಾನವ ಸೇವೆ ಮಾಧವ ಸೇವೆ ಎಂಬಂತೆ ನಡೆಯುವ ಕಾಯಕ. ನೂರಾರು ಅನಾಥ ಶವಗಳು ಅಲ್ಲಿ ದಹನವಾಗಿದೆ. ಕೊಂಡೆವೂರು ಆಶ್ರಮದ ಕರೆಯಂತೆ ಈ ಮೃತದೇಹವೂ ಬಂದಿತ್ತು. ಆದರೆ ಮೃತದೇಹವನ್ನು ತರುವಾಗಲೇ ಮಾಧ್ಯಮದವರನ್ನೂ ಕರೆ ತಂದಿದ್ದರು. ಚಿತೆಗೆ ಸೌದೆ ಇಡಬಹುದೇ ಎಂದು ಕೇಳಿ ಕಟ್ಟಿಗೆ ಇರಿಸಿದ್ದರು. ಇದರ ಪೋಟೋ, ಹೊತ್ತುವ ಚಿತೆಯ ವೀಡಿಯೋ ತೆಗೆದು, ಸೇವಾ ಭಾರತಿಯ ಕಾಯಕ ಉಲ್ಲೇಖಿಸದೇ ಪ್ರಚಾರ ನಡೆಸಿದ್ದು ವಿಷಾದನೀಯ ಎಂದು ಚಿತೆಗೆ ಅಗ್ನಿ ಸ್ಪರ್ಷ ಮಾಡಿ, ಚೆರುಗೋಳಿ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡುವ, ಸೇವಾಭಾರತಿಯ ಮಂಗಲ್ಪಾಡಿ ಘಟಕದ ಅಧ್ಯಕ್ಷ ರಘು ಸಿ. ಚೆರುಗೋಳಿ ಹೇಳಿದರು.
ಜಿ. ಪಂ. ಸದಸ್ಯೆ ಇರ್ಫಾನ ಇಕ್ಬಾಲ್ ಅವರ ಪತಿ ಇಕ್ಬಾಲ್ ಸಂಚಾಲಕತ್ವದಲ್ಲಿ ನಡೆಯುವ ಆಶ್ರಮದಿಂದಲೂ ಈ ಹಿಂದೆ ಮೂರು ಶವ ತಂದು ಇಲ್ಲಿ ಸೇವಾ ಭಾರತಿ ಮೂಲಕವೇ ಸಂಸ್ಕರಿಸಲಾಗಿದೆ. ಅನಾಥನಾಗಿ ಹೋದ ಹಿಂದೂ ಒಬ್ಬನನ್ನು ಅಂತ್ಯ ದಿನದಲ್ಲಿ ಶ್ರುಶ್ರೂಷೆ ಮಾಡಿಸಿ, ಮೃತಪಟ್ಟಾಗ ರುದ್ರಭೂಮಿಯ ತನಕವಷ್ಟೇ ತಲುಪಿಸಿದ ಅವರ ಕಾಯಕ ಶ್ಲಾಘನೀಯವೇ ಹೌದು. ಆದರೆ ಶವ ಸಂಸ್ಕಾರ ನಡೆಸಿದ್ದು ಸೇವಾ ಭಾರತಿ. ಅದನ್ನುಲ್ಲೇಖಿಸದೇ ಮಾಜಿ ಸಂಘಪರಿವಾರದ ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಲೀಗ್ ನಾಯಕಿ ಅಂತ್ಯ ಸಂಸ್ಕಾರ ನಡೆಸಿದರೆಂದು ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಆಗಿದೆ. ಇಜರ ಹಿಂದೆ ದುರುದ್ದೇಶವೋ, ನಿಗೂಢತೆಯೋ ಉಂಟೆಂಬುದು ಶಂಕಾಸ್ಪದವಾಗಿದೆ ಎಂದು ಸೇವಾ ಭಾರತಿ ಪ್ರಶ್ನಿಸಿದೆ.



