ವಾಷಿಂಗ್ಟನ್: 'ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಸತತ ದಾಳಿಯಿಂದಾಗಿ ಆ ದೇಶವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಒಪ್ಪಂದ ಮಾಡಿಕೊಳ್ಳಲು ಕಾತರದಲ್ಲಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಜಾರ್ಜಿಯಾದಲ್ಲಿ ಪ್ರತಿಕ್ರಿಯಿಸಿದ ಟ್ರಂಪ್, 'ಇರಾನ್ ಮೇಲೆ ತೀವ್ರ ಪ್ರಮಾಣದ ವೈಮಾನಿಕ ದಾಳಿಗಳು ನಡೆಯುತ್ತಿವೆ.
ಇದರಿಂದಾಗಿ ಅವರು ಒಪ್ಪಂದಕ್ಕೆ ಬರಲು ಬಯಸುತ್ತಾರೆ. ಆದರೆ ಅವರು ಇನ್ನೂ ಒಪ್ಪಂದಕ್ಕೆ ಸಿದ್ಧವಾಗಿಲ್ಲ. ಪ್ರತಿಸಲವೂ ಒಪ್ಪಂದ ಮಾಡಿಕೊಡಲು ಬಯಸಿದಾಗ ಅದನ್ನು ಸಂಪೂರ್ಣವಾಗಿ ಬದಲಾಯಿಸಲು ಬಯಸುತ್ತಾರೆ' ಎಂದು ಹೇಳಿದ್ದಾರೆ.
'ಇರಾನ್ ದೊಡ್ಡ ಬೆಲೆ ತೆರಬೇಕಾಗುತ್ತದೆ. ಅದು ಸರ್ವನಾಶವಾಗಲಿದೆ' ಎಂದು ಹೇಳಿದ್ದಾರೆ.
'ಕಣ್ಣಿಗೆ ಕಣ್ಣು' - ಅರಾಘ್ಚಿ ತಿರುಗೇಟು
ಮತ್ತೊಂದೆಡೆ ಅಮೆರಿಕದ ದಾಳಿ ಬೆದರಿಕೆಗೆ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ, 'ಇರಾನ್‌ನ ಯಾವುದೇ ಮೂಲಸೌಕರ್ಯ ಅಥವಾ ಆಸ್ತಿಗಳ ಮೇಲೆ ದಾಳಿ ನಡೆಸಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು' ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ನಮ್ಮ ರಕ್ಷಣಾ ನೀತಿಯು ಅತ್ಯಂತ ಸ್ಪಷ್ಟವಾಗಿದೆ - 'ಕಣ್ಣಿಗೆ ಕಣ್ಣು' ಎಂದು ಹೇಳಿದ್ದಾರೆ.
'ನಮ್ಮ ದೇಶದ ವಿರುದ್ದದ ಯಾವುದೇ ಆಕ್ರಮಣಕ್ಕೆ ತಕ್ಕ ಉತ್ತರ ಸಿಗಲಿದೆ. ದಾಳಿಗೆ ಯಾವುದೇ ರೀತಿಯ ಬೆಂಬಲ ನೀಡುವವರೂ ಗುರಿಯಾಗಲಿದ್ದಾರೆ' ಎಂದು ಎಚ್ಚರಿಸಿದ್ದಾರೆ.

