ಕಾಸರಗೋಡು: ಜಿಲ್ಲೆಯ ಚೀಮೇನಿಯಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಯಾವುದೇ ತೀರ್ಮಾನ ಸರ್ಕಾರ ಕೈಗೊಂಡಿಲ್ಲ ಮತ್ತು ಅಂತಹ ಯಾವುದೇ ಪ್ರಸ್ತಾವನೆಯನ್ನು ಮುಂದುವರಿಸುವುದಿಲ್ಲ ಎಂದು ರಾಜ್ಯ ವಿದ್ಯುತ್, ಪರಿಸರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸನ್ನಿ ಜೋಸೆಫ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಇಲಾಖೆಯ ಅವಲೋಕನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಚೀಮೇನಿಯಲ್ಲಿ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯನ್ನು ಮುಂದುವರಿಸದಂತೆ ಜಿಲ್ಲೆಯ ಸಂಸದ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಜಿಲ್ಲೆಯ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಈಗಾಗಲೇ ಸಲಹೆ ನೀಡಿದ್ದಾರೆ.
ಚೀಮೇನಿಯಲ್ಲಿ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯನ್ನು ಮುಂದುವರಿಸಲು ಸರ್ಕಾರ ಉದ್ದೇಶಿಸಿದೆ ಎಂಬ ಆತಂಕಕಾರಿ ಹೇಳಿಕೆಯೊಂದು ಹರಿದಾಡುತ್ತಿದ್ದು, ಈ ಬಗ್ಗೆ ಶಾಸಕ ಸಂದೀಪ್ ವಾರಿಯರ್ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಅವರು ತನ್ನ ಗಮನಕ್ಕೆ ತಂದಿರುವ ನಿಟ್ಟಿನಲ್ಲಿ ಈ ಸ್ಪಷ್ಟನೆ ನೀಡಲಾಗಿದೆ. ಪ್ರಸಕ್ತ ಸ್ಥಳದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಯಾವುದೇ ತೀರ್ಮಾನವೂ ಸರ್ಕಾರಕ್ಕಿಲ್ಲ ಎಂದು ಸಚಿವರು ಭರವಸೆ ನೀಡಿದರು.
ಉಡುಪಿ-ಕರಿಂದಲ ವಿದ್ಯುತ್ ಲೈನ್ ಯೋಜನೆಯಿಂದ ಭೂಮಿಕಳೆದುಕೊಂಡ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಪರಿಹಾರ ನೀಡಲಾಗುವುದು. ಅಭಿವೃದ್ಧಿಯ ಹೆಸರಿನಲ್ಲಿ ಯಾರೊಬ್ಬರೂ ಸಂತ್ರಸ್ತರಾಗಬಾರದು ಎಂಬ ಸರ್ಕಾರದ ನೀತಿಯನ್ನು ಅವರು ಪುನರುಚ್ಛರಿಸಿದರು. ಇದೇ ಸಂದರ್ಭ ಮೈಲಾಟ್ಟಿ ಬ್ಯಾಟರಿ ಶೇಖರಣಾ ವ್ಯವಸ್ಥೆ ಮತ್ತು ಮುಳ್ಳೇರಿಯಾ ಸಬ್‍ಸ್ಟೇಷನ್‍ನಲ್ಲಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಂಡರು. ಚೀಮೇನಿ ಸೋಲಾರ್ ಪಾರ್ಕ್‍ನ ಪ್ರಸಕ್ತ ಸ್ಥಿತಿಗತಿಯ ಬಗ್ಗೆಯೂ ಚರ್ಚಿಸಲಾಯಿತು. ಅಲ್ಲದೆ, ನೌಕರರು ಯಾವುದೇ ದೂರಿಗೆ ಆಸ್ಪದ ನೀಡದಂತೆ ಸಾರ್ವಜನಿಕರಿಗೆ ಸೇವೆ ಒದಗಿಸುವುದರ ಜತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸುವಂತೆ ನಿರ್ದೇಶನ ನೀಡಿದರು.
ಶಾಸಕರಾದ ಎ.ಕೆ.ಎಂ. ಅಶ್ರಫ್, ಕಲ್ಲಟ್ರ ಮಾಹಿನ್, ಕೆ. ನೀಲಕಂಠನ್, ಗೋವಿಂದನ್ ಪಳ್ಳಿಕ್ಕಾಪ್ಪಿಲ್, ಸಂದೀಪ್ ವಾರಿಯರ್; ಜಿಪಂ ಅಧ್ಯಕ್ಷ ಸಾಬು ಅಬ್ರಹಾಂ, ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್, ಪ್ರಸರಣ ಎಂಜಿನಿಯರ್ ಶಾಜಿ ಸುಧಾಕರನ್ ಹಾಗೂ ಟ್ರಾನ್ಸ್‍ಗ್ರಿಡ್ ಮುಖ್ಯ ಎಂಜಿನಿಯರ್ ವಿ. ಸುರೇಶ್ ಉಪಸ್ಥೀತರಿದ್ದರು. ಕಾರ್ಯನಿರ್ವಾಹಕ ಎಂಜಿನಿಯರ್ ಶಿವದಾಸನ್ ವಿಷಯವನ್ನು ಮಂಡಿಸಿದರು. ಕೇರಳ ರಾಜ್ಯ ವಿದ್ಯುತ್ ಮಂಡಳಿಯ ನಿರ್ದೇಶಕ ಎಂ.ಪಿ. ರಾಜನ್ ಸ್ವಾಗತಿಸಿದರು. ಉತ್ತರ ಮಲಬಾರ್ ವಿತರಣಾ ವಿಭಾಗದ ಮುಖ್ಯ ಎಂಜಿನಿಯರ್ ಟಿ.ಎಸ್. ಜಯಶ್ರೀ ವಂದಿಸಿದರು.



