ಲಂಡನ್: 'ನ್ಯಾಯಾಲಯದಲ್ಲಿ ಪ್ರಾಥಮಿಕ ಪ್ರಕರಣ ದೃಢಪಟ್ಟ ನಂತರ, ನೀರವ್ ಮೋದಿ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು 2021ರಲ್ಲೇ ಗೃಹ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಸಹಿ ಹಾಕಿದ್ದೆ. ಆದರೂ ಕೂಡ ಈಗಲೂ ಬ್ರಿಟನ್‌ನಲ್ಲಿದ್ದಾರೆ ಎಂಬುದು ಆತಂಕ ಹಾಗೂ ದಿಗಿಲು ಮೂಡಿಸಿದೆ' ಎಂದು ಬ್ರಿಟನ್‌ನ ಮಾಜಿ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ತಿಳಿಸಿದ್ದಾರೆ.
'ನಮ್ಮ ವ್ಯವಸ್ಥೆಯು ವಿವೇಚನೆಯಿಂದ ಕೂಡಿದ್ದರೆ, ಆರೋಪಿಯನ್ನು ಇಲ್ಲಿಯೇ ಬಂಧಿಸಿಡುತ್ತಿರಲಿಲ್ಲ. ಇಷ್ಟೊತ್ತಿಗೆ ಆರೋಪಿಯು (ನೀರವ್) ದೇಶದಲ್ಲಿ ಇರುತ್ತಿರಲಿಲ್ಲ' ಎಂದು 'ದಿ ಡೈಲಿ ಟೆಲಿಗ್ರಾಫ್'ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ₹13 ಸಾವಿರ ಕೋಟಿ ಸಾಲ ವಂಚಿಸಿರುವ ಪ್ರಕರಣದ ವಿಚಾರಣೆಗಾಗಿ ನೀರವ್ ಅವರನ್ನು ಹಸ್ತಾಂತರಿಸುವಂತೆ ಬ್ರಿಟನ್‌ಗೆ ಭಾರತ ಹಲವು ಸಲ ಮನವಿ ಮಾಡಿತ್ತು.

