ವಾಷಿಂಗ್ಟನ್: ಚೀನಾ ಮತ್ತು ಭಾರತ ದೇಶಗಳ ಮೇಲಿನ ವಿಶ್ವಾಸಾರ್ಹತೆಯನ್ನು ಫೋನ್ ಉದಾಹರಣೆ ಮೂಲಕ ವಿವರಿಸಿರುವ ಅಮೆರಿಕದ ರಿಪಬ್ಲಿಕನ್ ಪಕ್ಷದ ಸೆನೆಟರ್ ಸ್ಟೀವ್ ಡೈನ್ಸ್, ಚೀನಾಕ್ಕಿಂತ ಭಾರತವು ವಿಶ್ವಾಸಾರ್ಹ ದೇಶ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ನಾನು ಭಾರತಕ್ಕೆ ಹೋಗುವಾಗ ನನ್ನ ಫೋನನ್ನು ಧೈರ್ಯವಾಗಿ ತೆಗೆದುಕೊಂಡು ಹೋಗಬಲ್ಲೆ.
ಆದರೆ, ಚೀನಾಗೆ ತೆರಳುವಾಗ ಅದನ್ನು ಅಮೆರಿಕದಲ್ಲೇ ಇಟ್ಟು ಹೋಗುತ್ತೇನೆ ಎಂದಿದ್ದಾರೆ.
ವಾಷಿಂಗ್ಟನ್‌ನಲ್ಲಿ ನಡೆದ ಭಾರತ-ಅಮೆರಿಕ ಕಾರ್ಯತಂತ್ರದ ಒಪ್ಪಂದ ವೇದಿಕೆಯ(ಯುಎಸ್‌ಐಎಸ್‌ಪಿಎಫ್) ನಾಯಕತ್ವ ಶೃಂಗದಲ್ಲಿ ಮಾತನಾಡಿರುವ ಅವರು, ಅಮೆರಿಕದೊಂದಿಗೆ ಪಾಲುದಾರಿಕೆಯಲ್ಲಿರುವ ಭಾರತವು, ಚೀನಾದ ನಾವೀನ್ಯತೆ ಜಾಲದ ಆಯಾಮ ಮತ್ತು ಅನುಪಾತಗಳಿಗೆ ಪ್ರತಿಸ್ಪರ್ಧಿಯಾಗಿ ಸಜ್ಜಾಗಿರುವ ವಿಶಿಷ್ಟ ರಾಷ್ಟ್ರವಾಗಿ ನಿಂತಿದೆ. ಈ ದ್ವಿಪಕ್ಷೀಯ ಸಂಬಂಧ ಎರಡೂ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಮಾತ್ರವಲ್ಲದೆ ಜಾಗತಿಕ ಸಮುದಾಯಕ್ಕೂ ನಿರ್ಣಾಯಕವಾಗಿವೆ ಎಂದು ವಿವರಿಸಿದ್ದಾರೆ.
ಭಾರತ ಮತ್ತು ಚೀನಾದ ಬಗೆಗಿನ ನಂಬಿಕೆಯ ಅಂಶದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು, ಚೀನಾಗೆ ಪ್ರಯಾಣಿಸುವಾಗ ತಮ್ಮೊಂದಿಗೆ ಫೋನ್ ಕೊಂಡೊಯ್ಯುವುದಿಲ್ಲ ಎಂದು ಹೇಳಿದ್ದಾರೆ.
'ನಾನು ಚೀನಾಗೆ ಪ್ರಯಾಣಿಸುವಾಗ, ನನ್ನ ಫೋನ್ ನನ್ನ ಜೊತೆ ಬೀಜಿಂಗ್‌ಗೆ ಬರುವುದಿಲ್ಲ. ಅದು ವಾಷಿಂಗ್ಟನ್ ಡಿಸಿಯ ನನ್ನ ಡೆಸ್ಕ್‌ನಲ್ಲೇ ಇರುತ್ತದೆ. ಆದರೆ, ನಾನು ದೆಹಲಿ ಅಥವಾ ಭಾರತದ ಯಾವುದೇ ಪ್ರದೇಶಕ್ಕೆ ತೆರಳುವಾಗ ಅದು ನನ್ನ ಜೊತೆಯಲ್ಲಿರುತ್ತದೆ' ಎಂದಿದ್ಧಾರೆ.
ಚೀನಾ ಒಡ್ಡಿರುವ ಭೌಗೋಳಿಕ ರಾಜಕೀಯ ಸವಾಲನ್ನು ಎದುರಿಸುವಾಗ ಭಾರತದ ಪಾತ್ರದ ಬಗ್ಗೆ ಅಮೆರಿಕವು ಹೆಚ್ಚು ಕಾರ್ಯತಂತ್ರದ ವಿಧಾನವನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಫೆಡ್‌ಎಕ್ಸ್‌ನ ಅಧ್ಯಕ್ಷ ಮತ್ತು ಸಿಇಒ ರಾಜ್ ಸುಬ್ರಮಣಿಯಂ ಅವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ಡೈನ್ಸ್ ಹೇಳಿದ್ದಾರೆ.

