ಹೈದರಾಬಾದ್: ವೈರಸ್ ಮತ್ತು ಕಾಕ್ರೋಚ್‌ಗಳ (ಜಿರಳೆ) ಗ್ಯಾಂಗ್ ದೇಶವನ್ನು ವಿಭಜಿಸಲು ಬಯಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ವಾಗ್ದಾಳಿ ನಡೆಸಿದ್ದಾರೆ.
ಮೂರು ದಿನಗಳ ತೆಲಂಗಾಣ ಪ್ರವಾಸದ ಭಾಗವಾಗಿ ವಾರಂಗಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿಯ ಬೂತ್ ಅಧ್ಯಕ್ಷರು, ಬುಡಕಟ್ಟು ಮುಖಂಡರ ಮತ್ತು ವಿದ್ಯಾರ್ಥಿಗಳ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
'ದೇಶದಲ್ಲಿ ವೈರಸ್ ಮತ್ತು ಕಾಕ್ರೋಚ್‌ಗಳಂತಹ ಪಕ್ಷಗಳು ಬರುತ್ತಿವೆ. ದೇಶವನ್ನು ವಿಭಜಿಸುವುದೇ ಇವರ ಮುಖ್ಯ ಉದ್ದೇಶ. ಈ ವೈರಸ್ ಮತ್ತು ಜಿರಳೆ ನಾಯಕರ ಬಗ್ಗೆ ಪ್ರತಿಯೊಬ್ಬರು ಎಚ್ಚರವಹಿಸಬೇಕು' ಎಂದಿದ್ದಾರೆ.
'ದೇಶವನ್ನು ವಿಭಜಿಸಲು ಬಯಸುವ ಇಂತಹವರಿಗೆ ಬಿಜೆಪಿಯ ಕಾರ್ಯಕರ್ತರಿಂದ ಮಾತ್ರ ಪಾಠ ಕಲಿಸಲು ಸಾಧ್ಯ. ಬಿಜೆಪಿಯು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಲು ಕಾರ್ಯಕರ್ತರೇ ಕಾರಣ' ಎಂದು ಶ್ಲಾಘಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ 'ಪಾರ್ಟ್ ಟೈಮ್ ರಾಜಕಾರಣಿ' ಎಂದು ಬಣ್ಣಿಸಿರುವ ನವೀನ್, ಬಿಜೆಪಿ ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ರಾಜಕೀಯ ಮತ್ತು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದಿದ್ದಾರೆ.
ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ವಾರಂಗಲ್ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಆದರೆ, ಇದೇ ಮಣ್ಣಿನ ಮಗನಿಗೆ ಕಾಂಗ್ರೆಸ್ ಸೂಕ್ತ ಗೌರವ ನೀಡಲಿಲ್ಲ ಎಂದು ಅವರು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ನಾಯಕರು ಸೇರಿದಂತೆ ನೆಹರು-ಗಾಂಧಿ ಕುಟುಂಬವನ್ನು ಹೊರತುಪಡಿಸಿ ಬೇರೆ ಯಾವುದೇ ನಾಯಕರನ್ನು ಗೌರವಿಸುವುದಿಲ್ಲ ಎಂದೂ ದೂರಿದ್ದಾರೆ.
ನರಸಿಂಹರಾವ್ ರಾವ್ ಅವರ ಪಾರ್ಥಿವ ಶರೀರವನ್ನು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲು ಬಿಟ್ಟಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕರು ರಾವ್ ಅವರನ್ನು ಗೌರವಿಸದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ರತ್ನ ಪ್ರಶಸ್ತಿ ನೀಡುವ ಮೂಲಕ ಗೌರವ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಚುನಾವಣೆಗೆ ಮುನ್ನ ಭರವಸೆಗಳನ್ನು ನೀಡುವುದು ಮತ್ತು ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಮರೆಯುವುದು ದೇಶದ ಹಳೆಯ ಪಕ್ಷದ ಚಾಳಿಯಾಗಿದೆ ಎಂದು ತೆಲಂಗಾಣದ ಆಡಳಿತಾರೂಢ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಎರಡು ಲಕ್ಷ ಸರ್ಕಾರಿ ಉದ್ಯೋಗಗಳನ್ನು ನೀಡುವ ಭರವಸೆಯನ್ನು ಈಡೇರಿಸುವ ಬದಲು, ಕಾಂಗ್ರೆಸ್ ಸರ್ಕಾರವು ದೆಹಲಿ ದರ್ಬಾರ್ ಅನ್ನು ಅಲಂಕರಿಸುವ ಎಟಿಎಂ ಆಗಿದೆ ಎಂದು ಗುಡುಗಿದ್ದಾರೆ.
ಹಿಂದುಳಿದ ವರ್ಗಗಳ (ಬಿಸಿ) ಅಡಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುತ್ತಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಪ್ರಸ್ತಾಪಿಸಿದ ಅವರು, ಇತರ ಸಮುದಾಯಗಳ ಪಾಲಿಗೆ ಧಕ್ಕೆ ತರುವ ಧರ್ಮಾಧಾರಿತ ಮೀಸಲಾತಿಯನ್ನು ಬಿಜೆಪಿ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.
ತೆಲಂಗಾಣದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಕಾರ್ಯಕರ್ತರಿಂದ ಮಾತ್ರ ಕಿತ್ತೊಗೆಯಲು ಸಾಧ್ಯ. ವಿಕಸಿತ ಭಾರತ ಮತ್ತು ವಿಕಸಿತ ತೆಲಂಗಾಣ ಗುರಿಯನ್ನು ಸಾಕಾರಗೊಳಿಸಲು ತೆಲಂಗಾಣದಲ್ಲಿ ಬಿಜೆಪಿ ನೇತೃತ್ವದ 'ಡಬಲ್ ಎಂಜಿನ್' ಸರ್ಕಾರವನ್ನು ಅಸ್ತಿತ್ವಕ್ಕೆ ತರಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

