ರಿಯಾದ್: ಇರಾಕ್‌ನಲ್ಲಿರುವ ಇರಾನ್ ಬೆಂಬಲಿತ ಗುಂಪುಗಳು ನಮ್ಮ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ನಡೆಸುತ್ತಿವೆ. ಅದನ್ನು ನಾವು ಸಮರ್ಥವಾಗಿ ಎದುರಿಸಿದ್ದು, ಹಲವು ಡ್ರೋನ್‌ಗಳನ್ನು ನಾಶಪಡಿಸಿದ್ದೇವೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯವು ಸೋಮವಾರ(ಜುಲೈ 27) ತಿಳಿಸಿದೆ.
ಇರಾನ್ ವಿರುದ್ಧ 13 ದಿನಗಳಿಂದ ಸತತ ಬಾಂಬ್ ದಾಳಿ ನಡೆಸುತ್ತಿದ್ದ ಅಮೆರಿಕ, ಶನಿವಾರದಿಂದ(ಜುಲೈ 25) ದಾಳಿ ಪ್ರಮಾಣವನ್ನು ಕಡಿಮೆ ಮಾಡಿದೆ. ಅದರ ಬೆನ್ನಲ್ಲೇ ಸೌದಿ ಅರೇಬಿಯಾ ಮೇಲೆ ದಾಳಿ ನಡೆದಿದೆ.
ಇರಾನ್ ಬೆಂಬಲಿತ ಬಂಡುಕೋರರು ಇರಾಕ್ ನೆಲೆಗಳಿಂದ ಭಯೋತ್ಫಾದಕ ದಾಳಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯವು ಅಧಿಕೃತ ಹೇಳಿಕೆಯನ್ನು ಪೋಸ್ಟ್ ಮಾಡಿದೆ.
ರಾಜಧಾನಿ ರಿಯಾದ್ ಮತ್ತು ದೇಶದ ಪೂರ್ವ ಭಾಗಗಳಲ್ಲಿರುವ ತೈಲ ಘಟಕಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗುತ್ತಿದೆ. ತನ್ನ ನೆಲೆಯಿಂದ ಈ ರೀತಿಯ ದಾಳಿಗಳು ನಡೆಯದಂತೆ ಇರಾಕ್ ತಡೆಯಬೇಕು ಎಂದು ಒತ್ತಾಯಿಸಿದೆ.
ಇರಾನ್ ಬೆಂಬಲಿತ ಹೂಥಿ ಬಂಡುಕೋರರು ಸೌದಿ ಅರೇಬಿಯಾದ ಮೇಲೆ ಇತ್ತೀಚೆಗೆ ಕ್ಷಿಪಣಿ ದಾಳಿ ಕೂಡ ನಡೆಸಿದ್ದರು.

