ನವದೆಹಲಿ: 'ಸಫ್ದರ್‌ಜಂಗ್ ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮನ್ನು ಕೈದಿಯಂತೆ ನಡೆಸಿಕೊಳ್ಳಲಾಯಿತು' ಎಂದು ಶಿಕ್ಷಣ ತಜ್ಞ, ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಆರೋಪಿಸಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಬೆಂಬಲಿಸಿ ಜೂನ್ 28 ರಿಂದ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ವಾಂಗ್ಚೂಕ್ ಅವರನ್ನು, ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಜುಲೈ 18ರಂದು ಸಫ್ಧರ್‌ಜಂಗ್ ಆಸ್ಪತ್ರೆಗೆ ಬಲವಂತವಾಗಿ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ಕಳೆದಕ್ಷಣಗಳನ್ನು ಮೆಲುಕು ಹಾಕಿರುವ ವಾಂಗ್ಚೂಕ್, ಉತ್ತರ ಕೊರಿಯಾದಲ್ಲಿ ಇದ್ದಂತೆ ಭಾಸವಾಯಿತು ಎಂದು ಹೇಳಿದ್ದಾರೆ.
'ಅದು ಆಸ್ಪತ್ರೆಯಾಗಿರಲಿಲ್ಲ, ಜೈಲಾಗಿತ್ತು. ನನ್ನನ್ನು ಕೈದಿಯಂತೆ ಅಲ್ಲಿ ಇಡಲಾಗಿತ್ತು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಪ್ರತಿ ವಿಷಯಕ್ಕೂ ನಿರ್ಬಂಧ ಹಾಕುತ್ತಿದ್ದರು. ನಾನು ಕೊಠಡಿಯಿಂದ ಹೊರಗೆ ಹೆಜ್ಜೆ ಇಡುವಂತಿರಲಿಲ್ಲ. ನಮ್ಮ ಕೊಠಡಿಯ ಬಳಿ ಒಂದು ಹಕ್ಕಿಯೂ ರೆಕ್ಕೆ ಬಡಿಯುವಂತಿರಲಿಲ್ಲ. ಯಾರನ್ನೂ ಭೇಟಿಯಾಗಲು ಅನುಮತಿ ಕೊಡುತ್ತಿರಲಿಲ್ಲ. ಕೇವಲ ಮೂವರು ಸಂಬಂಧಿಕರಿಗೆ ಮಾತ್ರ ಇರಲು ಅವಕಾಶ ನೀಡಲಾಗಿತ್ತು' ಎಂದಿದ್ದಾರೆ.
'ಮೊಬೈಲ್ ಫೋನ್, ಲ್ಯಾಪ್‌ಟಾಪ್ ಇಟ್ಟುಕೊಳ್ಳಲೂ ಬಿಟ್ಟಿಲ್ಲ. ಇದರಿಂದ ಬೆಂಬಲಿಗರನ್ನು ತಲುಪುದು ನನಗೆ ಕಷ್ಟವಾಗಿತ್ತು. ಅದಕ್ಕೆ ಟಿಶ್ಯೂ ಪೇಪರ್ ಮೇಲೆ ನನ್ನ ಅಭಿಪ್ರಾಯಗಳನ್ನು ಬರೆದು ಕಳುಹಿಸುತ್ತಿದ್ದೆ. ಕೆಲವೊಮ್ಮೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿತ್ತು' ಎಂದು ಹೇಳಿದ್ದಾರೆ.
ಮುಂದುವರಿದು, ಮೇದಾಂತ ಆಸ್ಪತ್ರೆಗೆ ಸ್ಥಳಾಂತರಗೊಳ್ಳಲು ನ್ಯಾಯಾಲಯ ಅನುಮತಿ ನೀಡಿದ ನಂತರವೂ, ಸಫ್ದರ್‌ಜಂಗ್ ಆಸ್ಪತ್ರೆಯಿಂದ ಹೊರಹೋಗದಂತೆ ತಮ್ಮನ್ನು ತಡೆಯಲಾಗಿತ್ತು ಎಂದು ವಾಂಗ್ಚೂಕ್ ಆರೋಪಿಸಿದ್ದಾರೆ.
'ಖಾಸಗಿ ಆಸ್ಪತ್ರೆಯಾದರೂ ಮೇದಾಂತ ಆಸ್ಪತ್ರೆಯಲ್ಲಿ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ನನ್ನ ಕೊಠಡಿಯ ಹೊರಗೆ ಸುಮಾರು ಐದರಿಂದ ಹತ್ತು ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕೆಳಮಹಡಿಯಲ್ಲಿ ಇನ್ನೂರರಿಂದ ಮುನ್ನೂರು ಪೊಲೀಸ್ ಸಿಬ್ಬಂದಿ ಇದ್ದರು' ಎಂದು ಹೇಳಿದ್ದಾರೆ.
'ಇಡೀ ಆಸ್ಪತ್ರೆಯನ್ನೇ ಮಿಲಿಟರಿ ಶಿಬಿರದಂತೆ ಬದಲಾಯಿಸಲಾಗಿತ್ತು. ಇಲ್ಲೂ(ಮೇದಾಂತ ಆಸ್ಪತ್ರೆ) ಕೂಡ ಯಾರೂ ನನ್ನನ್ನ ಭೇಟಿಯಾಗಲು ಅವಕಾಶವಿಲ್ಲ. ಹೊರಗೆ ಒಳಗೆ ತಿರುಗಲು ನಿರ್ಬಂಧಗಳಿವೆ. ಇದು ಈಗಲೂ ಮುಂದುವರಿದಿದೆ' ಎಂದು ತಿಳಿಸಿದ್ದಾರೆ.

