ನವದೆಹಲಿ: ಸಂಸತ್ ಚಲೋ ಪ್ರತಿಭಟನೆಯ ವೇಳೆ ಬಂಧನಕ್ಕೊಳಗಾದ, ಗಾಯಗೊಂಡಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನಾಕಾರರಿಗೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಂಗಳವಾರ ಬೆಂಬಲ ಸೂಚಿಸಿದ್ದಾರೆ. ಕಾನೂನು ಮತ್ತು ವೈದ್ಯಕೀಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಜಂತರ್ ಮಂತರ್ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಿಮ್ಮ ಹೋರಾಟದಿಂದ ಪ್ರಧಾನಿ ನರೇಂದ್ರ ಮೋದಿ ಮಣಿಯುವಂತಾಯಿತು. ನಮ್ಮ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ' ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಬಂಧನಕ್ಕೊಳಗಾದ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರಿಗೆ ಅಗತ್ಯವಿದ್ದರೆ ಹಿರಿಯ ವಕೀಲರ ಮೂಲಕ ಕಾನೂನು ನೆರವು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಕ್ರಮವನ್ನು ಟೀಕಿಸಿ, 'ಬ್ರಿಟಿಷರ ಆಳ್ವಿಕೆಯಲ್ಲಿಯೂ ಇಂತಹ ದೌರ್ಜನ್ಯ ನಡೆದಿರಲಿಲ್ಲ' ಎಂದರು. ಜಲಿಯನ್ವಾಲಾ ಬಾಗ್ ಹತ್ಯಾಕಾಂಡವನ್ನು ಉಲ್ಲೇಖಿಸಿದ ಅವರು, ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜ್ ಖಂಡಿಸಿದರು.
ಗಾಯಗೊಂಡ ಪ್ರತಿಭಟನಾಕಾರರಿಗೆ ವೈದ್ಯಕೀಯ ನೆರವು ಹಾಗೂ ಬಂಧಿತರ ಕುಟುಂಬಗಳಿಗೆ ಕಾನೂನು ನೆರವು ಒದಗಿಸಲು 85888 33548 ಸಹಾಯವಾಣಿ ಸಂಖ್ಯೆಯನ್ನೂ ಪ್ರಕಟಿಸಿದರು.
ನಂತರ ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅವರು, ಸೋಮವಾರದ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾದ ಎಲ್ಲ ಎಫ್ಐಆರ್ಗಳ ವಿವರ ಹಾಗೂ ಬಂಧಿತರ ಸಂಪೂರ್ಣ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು.
'ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆತಂಕಪಡುವ ಅಗತ್ಯವಿಲ್ಲ. ನಾವು ನಿಮ್ಮೊಂದಿಗಿದ್ದೇವೆ' ಎಂದು ಅವರು ಆಶ್ವಾಸನೆ ನೀಡಿದರು.

