ಮಧೂರು: ಶ್ರೀರಾಮ ಜನ್ಮಭೂಮಿಯಿಂದ ದೇವರ ಸ್ವಂತ ನಾಡಿಗೆ ಎಂಬ ಶೀರ್ಷಿಕೆಯೊಂದಿಗೆ ಅಯೋಧ್ಯೆಯಿಂದ ಹೊರಟ ಶ್ರೀರಾಮ ಧರ್ಮ ಸಂದೇಶ ಯಾತ್ರೆಯ ರಥ ಶುಕ್ರವಾರ ಸಂಜೆ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯಕ್ಕೆ ಆಗಮಿಸಿತು. ಮಧೂರು ದೇವಸ್ಥಾನದ ವತಿಯಿಂದ ಈ ಸಂದರ್ಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಅಯೋಧ್ಯೆಯಿಂದ ಅಖಂಡ ದೀಪ ಪ್ರಜ್ವಲನೆಯೊಂದಿಗೆ ಜು.1 ರಂದು ಹೊರಟ ರಥ ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮೂಲಕ ಕೇರಳಕ್ಕೆ ಆಗಮಿಸಿದ್ದು, ಆ.16 ರಂದು ತಿರುವನಂತಪುರಂ ಚೆಂಗೋಟುಕೋಣಂ ರಾಮದಾಸ ಆಶ್ರಮದಲ್ಲಿ ರಥಯಾತ್ರೆ ಸಮಾರೋಪಗೊಳ್ಳಲಿದೆ. ರಥಯಾತ್ರೆಯಲ್ಲಿ ಬ್ರಹ್ಮಚಾರಿ ಶ್ರೀಮಾನ್ ಉಣ್ಣಿ, ರಾಧಾಕೃಷ್ಣ, ಲಕ್ಷ್ಮಣ ಆಚಾರ್ಯ, ಅಜಿತ್, ಪ್ರಸಾದ್(ಎಲ್ಲರೂ ಪಾಲಕ್ಕಾಡ್ ನಿವಾಸಿಗಳು) ರಥವನ್ನು ಮುನ್ನಡೆಸುತ್ತಿದ್ದು, ರಥದಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ ಸಹಿತ ಹನೂಮಂತ ವಿಗ್ರಹ ಹಾಗೂ ಎಡನೀರು ಮಠದಿಂದ ಕೊಡಲ್ಪಟ್ಟು ಅಯೋಧ್ಯೆಯ ನಂದೀಗ್ರಾಮದಲ್ಲಿ ಪೂಜಿಸಲ್ಪಟ್ಟ ರಾಮ ಪಾದುಕೆಗಳಿವೆ.
ಮಧೂರು ಸನ್ನಿಧಿಯ ಆಡಳಿತ ಪ್ರಮುಖರಾದ ಪ್ರಭಾಶಂಕರ ಮಾಸ್ತರ್, ಶ್ಯಾಮ ಮಧ್ಯಸ್ತ, ಸುನಿಲ್ ಎಂ.ಆರ್., ಸಂಜೀವ ಪುಳ್ಕೂರು, ಸಂತೋಷ್ ಮಧೂರು, ತಿರುಮಲೇಶ್ವರ ಭಟ್ ಪಜ್ಜ, ಮೊದಲಾದವರ ನೇತೃತ್ವದಲ್ಲಿ ಸ್ವಾಗತಿಸಿದರು. ಶ್ರೀಕ್ಷೇತ್ರದ ಪ್ರಧಾನ ಅರ್ಚಕರು ಆರತಿ ಬೆಳಗಿದರು. ಬ್ರಹ್ಮಚಾರಿ ಶ್ರೀಮಾನ್ ಉಣ್ಣಿ ಅವರು ರಥಯಾತ್ರೆಯ ಬಗ್ಗೆ ವಿವರಿಸಿ ಶ್ರೀರಾಮನ ಧರ್ಮಸಂದೇಶ ಸಾರುವ ಮಾಹಿತಿಗಳನ್ನು ನೀಡಿದರು. ಭಕ್ತರು ಉಪಸ್ಥಿತರಿದ್ದರು. ಬಳಿಕ ರಥ ನೀಲೇಶ್ವರಕ್ಕೆ ತೆರಳಿತು.

-side.jpg)
-side.jpg)
