ನವದೆಹಲಿ: ಪ್ರತಿಭಟನೆಗಳನ್ನು ನಿಯಂತ್ರಿಸಲು ಪೆಲೆಟ್ ಗನ್‌ಗಳ ಬಳಕೆ ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 'ಅತ್ಯಂತ ತೀವ್ರ ಪರಿಸ್ಥಿತಿಯಲ್ಲಿ ಗುಂಡು ಹಾರಿಸಲು ಕಾನೂನಿನಲ್ಲಿ ಅವಕಾಶವಿರುವಾಗ, ಪೆಲೆಟ್ ಗನ್‌ಗಳನ್ನು ಮಾತ್ರ ಹೇಗೆ ಸಂಪೂರ್ಣವಾಗಿ ನಿಷೇಧಿಸಬಹುದು?' ಎಂದು ಪ್ರಶ್ನಿಸಿದೆ.
ಜುಲೈ 20ರಂದು ದೆಹಲಿಯಲ್ಲಿ ನಡೆದ 'ಚಲೋ ಸಂಸತ್' ಪ್ರತಿಭಟನೆಯ ವೇಳೆ ರ‍್ಯಾಪಿಡ್ ಆಕ್ಷನ್ ಫೋರ್ಸ್ (ಆರ್‌ಪಿಎಫ್) ಪೆಲೆಟ್ ಗನ್ ಬಳಸಿದ ಪ್ರಕರಣಕ್ಕೆ ಸಂಬಂಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿ. ಮೋಹನ್ ಅವರಿದ್ದ ಪೀಠ ನಡೆಸಿತು.
ಮಾಜಿ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್ ಹಾಗೂ ಪೆಲೆಟ್ ದಾಳಿಯಲ್ಲಿ ಗಾಯಗೊಂಡಿದ್ದ ಪ್ರಶಾಂತ್ ಕುಮಾರ್ ಸಿಂಗ್ ಮತ್ತು ಶೇಖ್ ಇರ್ಷಾದ್ ಮನ್ಸೂರಿ ಅರ್ಜಿ ಸಲ್ಲಿಸಿದ್ದರು.
ಸಂಪೂರ್ಣ ನಿಷೇಧದ ಬೇಡಿಕೆ ಸಮಂಜಸವಲ್ಲ
ವಿಚಾರಣೆ ವೇಳೆ ನ್ಯಾಯಮೂರ್ತಿ ಬಾಗ್ಚಿ, ವಿಶೇಷ ಸಂದರ್ಭಗಳಲ್ಲಿ ಪೆಲೆಟ್ ಗನ್‌ಗಳ ಬಳಕೆಗೆ ಪೊಲೀಸ್ ನಿಯಮಾವಳಿಯಲ್ಲಿ ಅವಕಾಶವಿದೆ ಎಂದು ಸೂಚಿಸಿದರು.
'ಶಾಂತಿಯುತ ಪ್ರತಿಭಟನೆಯೂ ಯಾವುದೇ ಕ್ಷಣದಲ್ಲಿ ಸಮಾಜಘಾತುಕ ಶಕ್ತಿಗಳ ನುಸುಳಿಕೆಯಿಂದ ಹಿಂಸಾತ್ಮಕವಾಗಬಹುದು. ಇಂತಹ ಸಂದರ್ಭಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಂತ ಹಂತವಾಗಿ ಬಲಪ್ರಯೋಗ ಅಗತ್ಯವಾಗಬಹುದು' ಎಂದು ನ್ಯಾಯಪೀಠ ಮೌಖಿಕವಾಗಿ ನುಡಿಯಿತು.
ಪೊಲೀಸ್ ನಿಯಮಗಳ ಸಾಂವಿಧಾನಿಕ ಮಾನ್ಯತೆಯನ್ನೇ ಪ್ರಶ್ನಿಸದೆ, ಪೆಲೆಟ್ ಗನ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರುವಂತೆ ಕೋರಿರುವುದು ಸಮರ್ಥನೀಯವಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಪೆಲೆಟ್ ಗನ್ ಬಳಕೆಗೆ ನಿಷೇಧ ಕೋರಿ ಸುಪ್ರೀಂ ಮೆಟ್ಟಿಲೇರಿದ ಐಪಿಎಸ್ ಮಾಜಿ ಅಧಿಕಾರಿ
ಆದರೆ, ಜುಲೈ 20ರ ಪ್ರತಿಭಟನೆಯಲ್ಲಿ ಪೆಲೆಟ್ ಗನ್‌ಗಳನ್ನು ಬಳಸಿದ ಕ್ರಮವು 'ಹಂತ ಹಂತದ ಬಲಪ್ರಯೋಗ'ದ ತತ್ವಕ್ಕೆ ಅನುಗುಣವಾಗಿತ್ತೇ ಎಂಬುದನ್ನು ಪರಿಶೀಲಿಸಲು ನ್ಯಾಯಪೀಠ ಸಿದ್ಧವಿದೆ ಎಂದು ಸ್ಪಷ್ಟಪಡಿಸಿತು.
ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಆದೇಶ
ವಿಚಾರಣೆ ಬಳಿಕ ದೆಹಲಿ ಸರ್ಕಾರಕ್ಕೆ ಮಧ್ಯಂತರ ನಿರ್ದೇಶನ ನೀಡಿದ ಸುಪ್ರೀಂ ಕೋರ್ಟ್, ಪ್ರತಿಭಟನೆಯ ವೇಳೆ ಪೆಲೆಟ್ ಗಾಯಗೊಂಡ ಅರ್ಜಿದಾರರು ಹಾಗೂ ಇದೇ ರೀತಿಯ ಪರಿಸ್ಥಿತಿಯಲ್ಲಿರುವ ಇತರರಿಗೆ ಸಮರ್ಪಕ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂದು ಆದೇಶಿಸಿತು.
ಜುಲೈ 20ರ ಘಟನೆಯಲ್ಲಿ ಬಳಸಲಾದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ದಾಖಲೆಗಳನ್ನು ಸಂರಕ್ಷಿಸುವಂತೆ ಅರ್ಜಿದಾರರು ಮಾಡಿದ ಮನವಿಯನ್ನೂ ನ್ಯಾಯಾಲಯ ದಾಖಲಿಸಿಕೊಂಡಿತು. ತನಿಖೆಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಂರಕ್ಷಿಸಲಾಗುವುದು ಎಂದು ಸಾಲಿಸಿಟರ್ ಜನರಲ್ ತಿಳಿಸಿದರು.

