ನವದೆಹಲಿ: ಇ 20 ಎಥನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ಎಂಜಿನ್ ಹಾಳಾಗಿದೆ ಅಥವಾ ವಾಹನಗಳ ಕಾರ್ಯಕ್ಷಮತೆ ಕಡಿಮೆಯಾಗಿದೆ ಎಂಬ ಕುರಿತು ಯಾವುದೇ ವ್ಯಾಪಕ ಅಥವಾ ಸಾಬೀತಾದ ದೂರುಗಳು ಬಂದಿಲ್ಲ ಎಂದು ಕೇಂದ್ರ ಸರಕಾರ ಸೋಮವಾರ ಹೇಳಿದೆ.
ಜೊತೆಗೆ ನಿಗದಿತ ಮಾನದಂಡಗಳ ಪ್ರಕಾರ, ಈ ಇಂಧನ ಬಳಕೆ ಸಂಪೂರ್ಣ ಸುರಕ್ಷಿತ ಎಂದು ವ್ಯಾಪಕ ವೈಜ್ಞಾನಿಕ ಅಧ್ಯಯನಗಳು ಮತ್ತು ನೈಜ ಅಂಕಿ-ಅಂಶಗಳಿಂದ ತಿಳಿದು ಬಂದಿದೆ ಎಂದು ಅದು ಹೇಳಿದೆ.
ಸಿಪಿಐ (ಎಂ) ರಾಜ್ಯ ಸಭಾ ಸಂಸದ ಜಾನ್ ಬ್ರಿಟ್ಟಾಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ, ನೀತಿ ಆಯೋಗ, ಭಾರತೀಯ ವಾಹನ ಸಂಶೋಧನಾ ಸಂಸ್ಥೆ (ಎಆರ್‌ಎಐ), ಭಾರತೀಯ ವಾಹನ ತಯಾರಕರ ಸಂಘ (ಎಸ್‌ಐಎಎಂ), ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿಎಲ್), ಭಾರತೀಯ ಪೆಟ್ರೋಲಿಯಂ ಸಂಸ್ಥೆ (ಐಐಪಿ), ತೈಲ ಮಾರಾಟ ಕಂಪೆನಿಗಳು (ಒಎಂಸಿ) ಮತ್ತು ವಾಹನ ತಯಾರಕರನ್ನು ಒಳಗೊಂಡ ಹಂತ ಹಂತವಾಗಿ ವೈಜ್ಞಾನಿಕವಾಗಿ ಸಿಂಧುವಾದ ಮತ್ತು ಸಮಾಲೋಚನ ಪ್ರಕ್ರಿಯೆ ಬಳಿಕ ಎಥನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಇ20 ಇಂಧನದಿಂದಾಗಿ ಎಂಜಿನ್ ವೈಫಲ್ಯ, ಇಂಧನ ಪಂಪ್ ಸಮಸ್ಯೆಗಳು ತುಕ್ಕು ಹಿಡಿಯುವುದು, ಇಂಧನ ದಕ್ಷತೆ ಕಡಿಮೆಯಾಗುವುದು, ನೀರಿನ ಕಲುಷಿತಗೊಳ್ಳುವಿಕೆ ಅಥವಾ ಕಾರ್ಯಕ್ಷಮತೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಾಹನ ತಯಾರಕರು, ಆಟೋಮೊಬೈಲ್ ಸಂಘಗಳು ಅಥವಾ ಗ್ರಾಹಕ ಸಂಸ್ಥೆಗಳಿಂದ ಯಾವುದೇ ರೀತಿಯ ವ್ಯಾಪಕ ಅಥವಾ ಸಾಬೀತಾದ ದೂರುಗಳನ್ನು ಸ್ವೀಕರಿಸಿಲ್ಲ ಎಂದು ಅವರು ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಕ್ತವಾದ ಕಳವಳಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಲಾಗಿದೆ ಎಂದು ಕೇಂದ್ರ ಸರಕಾರ ಒಪ್ಪಿಕೊಂಡಿದೆ.

