ಸ್ಕೋಪ್ಜೆ: ಉತ್ತರ ಮೆಸಿಡೋನಿಯಾ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಸ್ಕೋಪ್ಜೆಯ ವಸ್ತು ಸಂಗ್ರಹಾಲಯದಲ್ಲಿ ಬುಧವಾರ ಮಹಾತ್ಮ ಗಾಂಧೀಜಿಯ ಪುತ್ಥಳಿಯನ್ನು ಉತ್ತರ ಮೆಸಿಡೋನಿಯಾದ ಅಧ್ಯಕ್ಷೆ ಗೊರ್ಡಾನಾ ಸಿಲ್ಜನೋವ್ಸ್ಕಾ-ದವ್ಕೋವಾ ಅವರೊಂದಿಗೆ ಜಂಟಿಯಾಗಿ ಅನಾವರಣಗೊಳಿಸಿದರು.
ಪುತ್ಥಳಿ ಅನಾವರಣದ ಬಳಿಕ ಮಾತನಾಡಿದ ರಾಷ್ಟ್ರಪತಿ ಮುರ್ಮು, "ಈ ಪುತ್ಥಳಿಯು ಶಾಂತಿ, ಸಹಿಷ್ಣುತೆ ಮತ್ತು ಮಾನವೀಯತೆಯ ಕುರಿತಾದ ಭಾರತ ಹಾಗೂ ಉತ್ತರ ಮೆಸಿಡೋನಿಯಾದ ಬದ್ಧತೆಯ ಪ್ರತೀಕವಾಗಿದೆ. ಅಲ್ಲದೆ, ಉಭಯ ರಾಷ್ಟ್ರಗಳ ನಡುವಿನ ಸುದೀರ್ಘ ಸ್ನೇಹಕ್ಕೂ ಇದು ಸಂಕೇತವಾಗಿದೆ" ಎಂದು ಹೇಳಿದರು.
"ಮಹಾತ್ಮ ಗಾಂಧಿ ಭಾರತಕ್ಕೆ ಸೇರಿದವರಾಗಿದ್ದರೂ, ಅವರ ಸಂದೇಶ ಇಡೀ ಮನುಕುಲಕ್ಕೆ ಸೇರಿದೆ. ಸತ್ಯ ಮತ್ತು ಅಹಿಂಸೆ ದೌರ್ಬಲ್ಯದ ಸಂಕೇತವಲ್ಲ. ಬದಲಿಗೆ, ನ್ಯಾಯ, ಘನತೆ ಮತ್ತು ಸ್ವಾತಂತ್ರ್ಯವನ್ನು ಸಾಧಿಸುವ ಬಲಿಷ್ಠ ಸಾಧನ ಎಂಬುದನ್ನು ಅವರ ಜೀವನವೇ ಸಾರುತ್ತದೆ" ಎಂದು ಅವರು ಹೇಳಿದರು.
ಈ ಕುರಿತು ರಾಷ್ಟ್ರಪತಿ ಭವನವು ಎಕ್ಸ್ ನಲ್ಲಿ ಪ್ರಕಟಿಸಿದ ಪೋಸ್ಟ್ ನಲ್ಲಿ, "ಸ್ಕೋಪ್ಜೆಯ ವಸ್ತು ಸಂಗ್ರಹಾಲಯದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉತ್ತರ ಮೆಸಿಡೋನಿಯಾದ ಅಧ್ಯಕ್ಷೆ ಗೊರ್ಡಾನಾ ಸಿಲ್ಜನೋವ್ಸ್ಕಾ-ದವ್ಕೋವಾ ಅವರು ಜಂಟಿಯಾಗಿ ಮಹಾತ್ಮ ಗಾಂಧೀಜಿ ಪುತ್ಥಳಿಯನ್ನು ಅನಾವರಣಗೊಳಿಸಿದರು" ಎಂದು ತಿಳಿಸಿದೆ.

