ಒಟ್ಟು 150 ಪ್ರಶ್ನೆಗಳಲ್ಲಿ 67 ಪ್ರಶ್ನೆಗಳು 2024ರ ಯುಜಿಸಿ ನೆಟ್ ಇಂಗ್ಲಿಷ್ ಪರೀಕ್ಷೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗಳನ್ನೇ ಹೋಲುತ್ತಿವೆ ಮತ್ತು ಉತ್ತರಗಳ ಆಯ್ಕೆಯ ಕ್ರಮವೂ ಸಹ ಬದಲಾಗಿಲ್ಲ ಎಂದು ಅಭ್ಯರ್ಥಿಗಳು ಹಾಗೂ ತಜ್ಞರು ವರದಿ ಮಾಡಿದ ಬೆನ್ನಲ್ಲೇ ಈ ಕುರಿತು ತುರ್ತು ಮತ್ತು ನಿಷ್ಪಕ್ಷ ತನಿಖೆ ನಡೆಸುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಪ್ರಶ್ನೆಗಳು ಪುನರಾವರ್ತನೆಗೊಂಡಿವೆ ಎಂಬ ಆರೋಪಗಳು ನಿಜವೆಂದು ಕಂಡುಬಂದರೆ ಇದು ಭಾರತದ ಅತ್ಯಂತ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೊಂದಾದ ಯುಜಿಸಿ ನೆಟ್‌ನ ನಿಷ್ಪಕ್ಷತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಕಳವಳಗಳನ್ನುಂಟು ಮಾಡುತ್ತದೆ ಎಂದು ಜಿಂದಾಲ್ ಎಕ್ಸ್ ಪೋಸ್ಟ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಯುಜಿಸಿ ನೆಟ್ ಪರೀಕ್ಷೆಯು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ, ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) ಪ್ರಶಸ್ತಿಗಳು ಮತ್ತು ಪಿಎಚ್‌ಡಿ ಕಾರ್ಯಕ್ರಮಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡುತ್ತದೆ.
ಇತ್ತೀಚಿನ ಪರೀಕ್ಷೆಯೊಂದರಿಂದ ಇಷ್ಟೊಂದು ದೊಡ್ಡ ಸಂಖ್ಯೆಯ ಪ್ರಶ್ನೆಗಳನ್ನು ಪುನರಾವರ್ತಿಸುವುದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುವ ಉದ್ದೇಶವನ್ನೇ ಅರ್ಥಹೀನವಾಗಿಸುತ್ತದೆ. ಅಲ್ಲದೆ ತರಬೇತಿ ಸಂಸ್ಥೆಗಳು ಅಥವಾ ಇತರ ಮೂಲಗಳ ಮೂಲಕ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳಿಂದ ವ್ಯಾಪಕವಾಗಿ ಸಿದ್ಧತೆ ನಡೆಸಿದ್ದ ಅಭ್ಯರ್ಥಿಗಳಿಗೆ ಇದು ಅನುಚಿತ ಅನುಕೂಲವನ್ನು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.
ವರದಿಯಾಗಿರುವ ಈ ಲೋಪವು ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವವರ ಆಯ್ಕೆ, ಪ್ರಶ್ನೆಪತ್ರಿಕೆಗಳ ಪರಿಶೀಲನೆ ಮತ್ತು ಪರೀಕ್ಷೆಯ ಮೊದಲು ಗುಣಮಟ್ಟ ನಿಯಂತ್ರಣಕ್ಕಾಗಿ ಎನ್‌ಟಿಎ ಅಳವಡಿಸಿಕೊಂಡಿರುವ ಕಾರ್ಯವಿಧಾನದ ಸಂಪೂರ್ಣ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಇಂತಹ ನಿರ್ಲಕ್ಷ್ಯವು ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಗಂಭೀರವಾಗಿ ಕುಂದಿಸುತ್ತದೆ ಮತ್ತು ನೈಜ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳ ಹಿತಾಸಕ್ತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಜಿಂದಾಲ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ತನ್ನ ದೂರಿನಲ್ಲಿ ಹೇಳಿದ್ದಾರೆ.

