ತಿರುವನಂತಪುರಂ: ಕಳೆದ 11 ವರ್ಷಗಳಲ್ಲಿ ಕೇರಳ ಕರಾವಳಿಯಲ್ಲಿ 469 ಮೀನುಗಾರರು ಅವಘಡದಲ್ಲಿ ಸಾವನ್ನಪ್ಪಿದ್ದಾರೆ ಮತ್ತು 160 ಜನರು ಕಾಣೆಯಾಗಿದ್ದಾರೆ ಎಂದು ರಾಜ್ಯ ಮೀನುಗಾರಿಕಾ ಸಚಿವ ವಿ.ಇ. ಅಬ್ದುಲ್ ಗಫೂರ್ ಅವರ ಕಚೇರಿಯ ಅಧಿಕೃತ ಅಂಕಿಅಂಶಗಳು ತೋರಿಸುತ್ತವೆ.
ಇತ್ತೀಚೆಗೆ ಸಮುದ್ರದಲ್ಲಿ ಕಾಣೆಯಾದ ಇಬ್ಬರು ಮೀನುಗಾರರ ಹುಡುಕಾಟವು ನಿಷ್ಪರಿಣಾಮಕಾರಿಯಾಗಿದೆ ಎಂದು ಆರೋಪಿಸಿ ಕರಾವಳಿ ಪ್ರದೇಶಗಳಲ್ಲಿ ನಡೆದ ಪ್ರತಿಭಟನೆಗಳ ನಡುವೆ ಸರ್ಕಾರ ಶುಕ್ರವಾರ ಈ ಮಾಹಿತಿಯನ್ನು ಬಿಡುಗಡೆ ಮಾಡಿದೆ.
2015-16 ರಿಂದ 2025-26ರ ಅವಧಿಯಲ್ಲಿ, ಕೇರಳ ಸಾಗರ ಮೀನುಗಾರಿಕೆ ನಿಯಂತ್ರಣ ಜಾರಿ 23,000 ಗಸ್ತು ಮತ್ತು 5,072 ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿ 47,773 ಮೀನುಗಾರರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದೆ.
2017-18ರಲ್ಲಿ ಅತಿ ಹೆಚ್ಚು ಸಾವುಗಳು (79) ವರದಿಯಾಗಿವೆ. ಇದರ ನಂತರ 2025-26ರಲ್ಲಿ 55 ಸಾವುಗಳು ಮತ್ತು 2023-24ರಲ್ಲಿ 54 ಸಾವುಗಳು ಸಂಭವಿಸಿವೆ. 2017-18ರಲ್ಲಿಯೂ ಅತಿ ಹೆಚ್ಚು ಕಾಣೆಯಾದ ವ್ಯಕ್ತಿಗಳು (29) ದಾಖಲಾಗಿದ್ದಾರೆ.
ಪ್ರಸಕ್ತ 2025-26ನೇ ವರ್ಷದಲ್ಲಿ ಇಲ್ಲಿಯವರೆಗೆ, 2,107 ಗಸ್ತು ಮತ್ತು 560 ರಕ್ಷಣಾ ಕಾರ್ಯಾಚರಣೆಗಳ ಮೂಲಕ 6,556 ಜನರನ್ನು ರಕ್ಷಿಸಲಾಗಿದೆ.
ಈ ವರ್ಷ, 55 ಜನರು ಸಾವನ್ನಪ್ಪಿದ್ದಾರೆ ಮತ್ತು 3 ಜನರು ಕಾಣೆಯಾಗಿದ್ದಾರೆ. ಜುಲೈ 31 ರಂದು ಪುತಂತುರ ಬಳಿ ದೋಣಿ ಮಗುಚಿದ ನಂತರ ನಾಪತ್ತೆಯಾದ 26 ವರ್ಷದ ಗೌತಮ್ ಕೃಷ್ಣ ಮತ್ತು ವಿಝಿಂಜಮ್ ಕರಾವಳಿಯಲ್ಲಿ ಮಗುಚಿದ ದೋಣಿಯಿಂದ ನಾಪತ್ತೆಯಾದ ಪುಲ್ಲುವಿಲ ಮೂಲದ ಜಾನ್ (54) ಅವರ ಹುಡುಕಾಟವನ್ನು ಕರಾವಳಿ ಪೋಲೀಸರು ತೀವ್ರಗೊಳಿಸಿದ್ದಾರೆ.
ಗೌತಮ್ ಜೊತೆಗಿದ್ದ ಅವರ ತಂದೆ ರಾಧಾಕೃಷ್ಣನ್ (48) ಮತ್ತು ಅಜ್ಜ ರಾಜೀವ್ (74) ಅಪಘಾತದಲ್ಲಿ ಸಾವನ್ನಪ್ಪಿದರು. ಈ ಮಧ್ಯೆ, ಜಾನ್ ಅವರ ಸಂಬಂಧಿಕರು ವಿಝಿಂಜಂ ಕರಾವಳಿ ಪೆÇಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ, ಹುಡುಕಾಟವು ಹಾಸ್ಯಾಸ್ಪದವಾಗಿದೆ ಎಂದು ಆರೋಪಿಸಿದರು.

