ಹೈದರಾಬಾದ್: 48 ವರ್ಷದ ಶಾಲಾ ಪ್ರಾಂಶುಪಾಲೆಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ತೆಲಂಗಾಣದ ನಲ್ಗೊಂಡ ಪೊಲೀಸರು ಯಶಸ್ವಿಯಾಗಿದ್ದಾರೆ. ಜತೆಗೆ, ಹಣ ಮತ್ತು ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಅಪರಾಧ ಎಸಗಲು ಸಂಚು ರೂಪಿಸಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಆಗಸ್ಟ್ 12ರಂದು ಕೊಂಡಮಲ್ಲೇಪಲ್ಲಿಯ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಮತ್ತು ನಿರ್ದೇಶಕಿಯಾಗಿದ್ದ ರೂಪಾ ರೆಡ್ಡಿ ಅವರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರಿಗೆ 27 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.
ರೂಪಾ ರೆಡ್ಡಿ ಪತಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದರು.
ಸಿಸಿಟಿವಿ ದೃಶ್ಯಾವಳಿ, ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಸಾಕ್ಷಿಗಳು, ಬೆರಳಚ್ಚು, ತಾಂತ್ರಿಕ ದತ್ತಾಂಶ ಮತ್ತು ಶಂಕಿತರ ಚಲನವಲನಗಳನ್ನು ಪರಿಶೀಲಿಸಿ 80ಕ್ಕೂ ಹೆಚ್ಚು ಜನರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
ವಿದ್ಯಾರ್ಥಿಗಳತ್ತ ಬೆರಳು ತೋರಿದ 'ಬಾಬು'
ಫೋನ್ ಸ್ವಿಚ್ ಆಫ್ ಆಗುವ ಮೊದಲು ರೂಪಾ ರೆಡ್ಡಿ ಅವರು ಚಿಕ್ಕಮ್ಮನೊಂದಿಗೆ ಮಾತನಾಡುತ್ತಾ ಕೊನೆಯದಾಗಿ 'ಬಾಬು' ಎಂಬ ಪದವನ್ನು ಬಳಸಿದ್ದರು. ಇದೇ ಪದ ತನಿಖಾಧಿಕಾರಿಗಳಿಗೆ ಪ್ರಮುಖ ಸುಳಿವು ನೀಡಿತ್ತು.
ರೂಪಾ ರೆಡ್ಡಿ ಯಾರನ್ನು ಉದ್ದೇಶಿಸಿ ಮಾತನಾಡಿರಬಹುದು ಎಂದು ತನಿಖೆ ನಡೆಸಿದೆವು. ಇದು ಶಾಲೆಯ ವಿದ್ಯಾರ್ಥಿಗಳತ್ತ ನೋಡುವಂತೆ ಮಾಡಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ಶರತ್ ಚಂದ್ರ ಪವಾರ್ ತಿಳಿಸಿದ್ದಾರೆ.
ತನಿಖಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದರು. ಶಾಲೆಗೆ ಗೈರಾಗಿದ್ದ 10ನೇ ತರಗತಿಯ ಐದು ವಿದ್ಯಾರ್ಥಿಗಳನ್ನು ಗುರುತಿಸಿದ್ದರು. ಅವರಲ್ಲಿ ಇಬ್ಬರು ಕಳೆದ ಕೆಲವು ದಿನಗಳಿಂದ ಅಪಾರ ಹಣ ವೆಚ್ಚ ಮಾಡುತ್ತಿದ್ದು, ಪಾರ್ಟಿಗಳನ್ನು ಮಾಡುತ್ತಿದ್ದರು ಎಂಬುದು ತಿಳಿದುಬಂತು ಎಂದು ಪವಾರ್ ವಿವರಿಸಿದ್ದಾರೆ.
ಬಳಿಕ ಆ ಇಬ್ಬರು ವಿದ್ಯಾರ್ಥಿಗಳನ್ನು ಬುಧವಾರ ವಶಕ್ಕೆ ಪಡೆಯಲಾಯಿತು. ವಿಚಾರಣೆ ವೇಳೆ ಸಂಚು ರೂಪಿಸಿ ರೂಪಾ ರೆಡ್ಡಿ ಅವರನ್ನು ಕೊಲೆ ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪವಾರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ರೂಪಾ
ಹಾಸ್ಟೆಲ್‌ನಲ್ಲಿದ್ದ ಆರೋಪಿಗಳ ಬ್ಯಾಗ್‌ನಲ್ಲಿ ಹಣ ಮತ್ತು ಮೊಬೈಲ್ ಪತ್ತೆಯಾಗಿತ್ತು. ಈ ಕುರಿತು ರೂಪಾ ರೆಡ್ಡಿ ಅವರು ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿ ತರಾಟೆಗೆ ತೆಗೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರೂಪಾ ರೆಡ್ಡಿ ಅವರು ಈ ವಿಚಾರವನ್ನು ವಿದ್ಯಾರ್ಥಿಗಳ ಪೋಷಕರ ಗಮನಕ್ಕೂ ತಂದಿದ್ದರು. ಈ ಘಟನೆಯೇ ರೂಪಾ ವಿರುದ್ಧ ವಿದ್ಯಾರ್ಥಿಗಳಲ್ಲಿ ದ್ವೇಷ ಬೆಳೆಯಲು ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಗುರುತು ಮರೆಮಾಚಲು 'ಗ್ಲೌಸ್' ಖರೀದಿ
ಆರೋಪಿಗಳು ಐದು ದಿನಗಳ ಕಾಲ ಕಳ್ಳತನಕ್ಕೆ ಯೋಜನೆ ರೂಪಿಸಿ ರೂಪಾ ರೆಡ್ಡಿ ಮನೆಗೆ ಭೇಟಿ ನೀಡಿದ್ದರು. ಗುರುತನ್ನು ಮರೆಮಾಚಲು ಚಾಕು ಮತ್ತು ಗ್ಲೌಸ್‌ಗಳನ್ನು ಖರೀದಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ರೂಪಾ ಕೊಲೆಯಾದ ದಿನ ವಿದ್ಯಾರ್ಥಿಗಳಲ್ಲಿ ಒಬ್ಬ ಮಂಕಿ ಕ್ಯಾಪ್ ಮತ್ತು ಗ್ಲೌಸ್ ಧರಿಸಿ ಮನೆಯೊಳಗೆ ಪ್ರವೇಶಿಸಿದ್ದ. ಮಲಗುವ ಕೋಣೆಯಲ್ಲಿ ಇರಿಸಲಾಗಿದ್ದ ₹2.50 ಲಕ್ಷ ನಗದು ತೆಗೆದುಕೊಂಡು ಓಡಿಹೋಗಲು ಆತ ಯತ್ನಿಸಿದ್ದ. ಆದರೆ, ಆತ ಧರಿಸಿದ್ದ ಮಂಕಿ ಕ್ಯಾಪ್ ಜಾರಿಬಿದ್ದಾಗ, ರೂಪಾ ರೆಡ್ಡಿ ಆತನನ್ನು ಗುರುತಿಸಿದ್ದರು. ಹಣ ಕಳವು ಮಾಡಿದ ವಿಚಾರವನ್ನು ಪೋಷಕರಿಗೆ ಹೇಳಬಹುದು ಎಂಬ ಭಯದಿಂದ ಆತ ಚಾಕುವಿನಿಂದ ಆಕೆಗೆ 27 ಬಾರಿ ಇರಿದಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊಲೆ ಮಾಡಿದ ಬಳಿಕ ಆರೋಪಿಗಳು ರಕ್ತಸಿಕ್ತ ಬಟ್ಟೆಗಳು ಮತ್ತು ಮಂಕಿ ಕ್ಯಾಪ್ ಅನ್ನು ಹೂತುಹಾಕುವ ಮೂಲಕ ಸಾಕ್ಷ್ಯವನ್ನು ಮರೆಮಾಚಲು ಯತ್ನಿಸಿದ್ದರು. ಬಳಿಕ ಕದ್ದ ಹಣವನ್ನು ತೆಗೆದುಕೊಂಡು ಗೋವಾ ಪ್ರವಾಸಕ್ಕೂ ಹೋಗಿದ್ದರು ಎಂದು ವರದಿಯಾಗಿದೆ.
ಆರೋಪಿಗಳಿಂದ ರಕ್ತದ ಕಲೆಗಳಿದ್ದ ಕೆಲವು ನೋಟುಗಳು ಸೇರಿದಂತೆ ₹1.54 ಲಕ್ಷ ನಗದು, ಹೊಸದಾಗಿ ಖರೀದಿಸಿದ್ದ ಐಫೋನ್ ಸೇರಿದಂತೆ ರೂಪಾ ರೆಡ್ಡಿ ಅವರ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಇಬ್ಬರೂ ಆರೋಪಿಗಳು ಬೇಗನೆ ಹಣ ಗಳಿಸಲು ಏನು ಮಾಡಬೇಕು, ಕೊಲೆ ಹೇಗೆ ಮಾಡಬಹುದು ಎಂಬುದರ ಕುರಿತು ಯುಟ್ಯೂಬ್‌ನಲ್ಲಿ ಹುಡುಕಾಟ ನಡೆಸಿದ್ದರು ಎಂದು ತಿಳಿದುಬಂದಿದೆ.

