HEALTH TIPS

ನೇಪಾಳ ಪ್ರವಾಹ: 359 ಸಾವು: ಒಂದು ಸಾವಿರಕ್ಕೂ ಅಧಿಕ ಮಂದಿ ನಾಪತ್ತೆ

ಕಠ್ಮಂಡು/ ನವದೆಹಲಿ: ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 359ಕ್ಕೆ ಏರಿಕೆಯಾಗಿದೆ. ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ತಂಡಗಳು ಪ್ರವಾಹಬಾಧಿತ ಪ್ರದೇಶಗಳಲ್ಲಿ ಗುರುವಾರ ತೀವ್ರ ಶೋಧ ಕಾರ್ಯಾಚರಣೆ ನಡೆಸಿದವು. 


ನೇಪಾಳದ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಯ ದಡದಲ್ಲಿರುವ ಗ್ರಾಮಗಳು ಹಾಗೂ ಪಟ್ಟಣಗಳ ಮೇಲೆ ಬುಧವಾರ ಬೆಳಿಗ್ಗೆ ಸುನಾಮಿಯಂತೆ ಅಪ್ಪಳಿಸಿದ ಕೆಸರುಮಿಶ್ರಿತ ನೀರು ಹಲವಾರು ಕಟ್ಟಡಗಳು, ಮನೆಗಳನ್ನು ನುಂಗಿಹಾಕಿತ್ತು.

ಸಂತ್ರಸ್ತ ಪ್ರದೇಶಗಳಲ್ಲಿ ಸಿಲುಕಿದ್ದ ನೂರಾರು ಮಂದಿಯನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಕೆಸರಿನಡಿ ಹೂತುಹೋಗಿರುವ ಮೃತದೇಹಗಳ ಪತ್ತೆಗೆ ನೇಪಾಳ ಸೇನೆಯು ಶ್ವಾನದಳದ ನೆರವು ಪಡೆದುಕೊಂಡಿದೆ.

'ಹಠಾತ್ ಪ್ರವಾಹಕ್ಕೆ ತುತ್ತಾದ ಪ್ರದೇಶಗಳು ಸ್ಮಶಾನದಂತಾಗಿವೆ. ಇಲ್ಲಿ ಉಳಿದಿರುವುದು ಮಣ್ಣು ಮತ್ತು ಕಲ್ಲುಗಳು ಮಾತ್ರ' ಎಂದು ಗಡಿ ಪಟ್ಟಣ ತಿಮುರೆಯಿಂದ ರಕ್ಷಿಸಲ್ಪಟ್ಟ ನೇಪಾಳದ ಕಸ್ಟಮ್ಸ್ ಏಜೆಂಟ್ ಓಂಕಾರ್ ಜೋಶಿ ದುರಂತದ ಭಯಾನಕತೆಯನ್ನು ಬಿಚ್ಚಿಟ್ಟರು.

'ಅವಶೇಷಗಳ ಅಡಿಯಿಂದ ಗುರುವಾರ ಇನ್ನಷ್ಟು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಚಿತ್ವಾನ್‌ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 132 ಮೃತದೇಹಗಳು ದೊರಕಿವೆ' ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ. '517 ವಿದೇಶಿಯರು ಒಳಗೊಂಡಂತೆ 823 ಮಂದಿ ನಾಪತ್ತೆಯಾಗಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

ದುರಂತದಲ್ಲಿ ಒಟ್ಟಾರೆಯಾಗಿ 1,400ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ನೇಪಾಳ ಮತ್ತು ಚೀನಾ ಸರ್ಕಾರಗಳ ಮಾಹಿತಿಯನ್ನು ಆಧರಿಸಿ 'ಎಎಫ್‌ಪಿ' ಸುದ್ದಿಸಂಸ್ಥೆ ವರದಿ ಮಾಡಿದೆ.

ಬದುಕುಳಿದವರಿಗಾಗಿ ಹುಡುಕಾಟ: ಮತ್ತೆ ಪ್ರವಾಹ ಸಂಭವಿಸುವ ಭೀತಿಯ ನಡುವೆಯೇ ರಕ್ಷಣಾ ತಂಡಗಳ ಸಿಬ್ಬಂದಿ ಕೆಸರು ಹಾಗೂ ಹೂಳಿನ ಮಧ್ಯೆ ಸಾಗಿ, ಬದುಕುಳಿದವರಿಗಾಗಿ ಹುಡುಕಾಟ ನಡೆಸಿದರು. ನೇಪಾಳ ಪ್ರಧಾನಿ ಬಾಲೇಂದ್ರ ಶಾ, ಅತಿ ಹೆಚ್ಚು ಹಾನಿಗೊಳಗಾದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದರು.

ಸ್ಥಳಾಂತರಗೊಂಡ ಕುಟುಂಬಗಳಿಗೆ ತಕ್ಷಣದ ಪರಿಹಾರ ಒದಗಿಸಲು ಮತ್ತು ರಸ್ತೆಗಳನ್ನು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲು ಸ್ಥಳೀಯ ಅಧಿಕಾರಿಗಳಿಗೆ ಶಾ ಸೂಚನೆ ನೀಡಿದ್ದಾರೆ ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ನಾಪತ್ತೆಯಾಗಿರುವ ವಿದೇಶಿಯರಲ್ಲಿ ಭಾರತೀಯರು ಅಲ್ಲದೆ ಆಸ್ಟ್ರೇಲಿಯಾ, ಬ್ರಿಟನ್‌, ಮಲೇಷ್ಯಾ, ನೆದರ್ಲೆಂಡ್ಸ್, ಪೋರ್ಚುಗಲ್, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಪ್ರಜೆಗಳು ಸೇರಿದ್ದಾರೆ ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

ಆಸ್ಪತ್ರೆಯ ಮುಂದೆ ಜನಸಾಗರ: ಪ್ರವಾಹದಲ್ಲಿ ನಾಪತ್ತೆಯಾದ ತಮ್ಮ ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗಾಗಿ ಹುಡುಕಾಟ ನಡೆಸಲು ನೂರಾರು ಮಂದಿ ಗುರುವಾರ ತ್ರಿಭುವನ್‌ ಯೂನಿವರ್ಸಿಟಿ ಟೀಚಿಂಗ್‌ ಆಸ್ಪತ್ರೆ ಬಳಿ ಜಮಾಯಿಸಿದ್ದರು ಎಂದು 'ದಿ ಕಠ್ಮಂಡು ಪೋಸ್ಟ್‌' ವರದಿ ಮಾಡಿದೆ.

ಕುಟುಂಬ ಸದಸ್ಯರ ಮತ್ತು ಸಂಬಂಧಿಕರ ಫೋಟೊಗಳು ಹಾಗೂ ಮೊಬೈಲ್ ಸಂಖ್ಯೆಗಳನ್ನು ಒಳಗೊಂಡ ಫಲಕಗಳನ್ನು ಹಿಡಿದುಕೊಂಡು, ಅವರನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ರಸುವಾ, ನುವಾಕೋಟ್‌ನಲ್ಲಿ ಹೆಚ್ಚು ಹಾನಿ: ನೇಪಾಳದ ರಸುವಾ ಮತ್ತು ನುವಾಕೋಟ್‌ ಜಿಲ್ಲೆಗಳಲ್ಲಿ ಹೆಚ್ಚು ಹಾನಿ ವರದಿಯಾಗಿದೆ. ರಸುವಾದ ತಿಮುರೆ ಮತ್ತು ರಸುವಾಗಢಿಯಲ್ಲಿ, ಭೋಟೆ ಕೋಶಿ ನದಿದಡದಲ್ಲಿರುವ ವಸತಿ ಪ್ರದೇಶಗಳು ಹಾಗೂ ಮೂಲಸೌಕರ್ಯಗಳಿಗೆ ಪ್ರವಾಹವು ವ್ಯಾಪಕ ಹಾನಿಯನ್ನು ಉಂಟುಮಾಡಿದೆ. ಈ ಎರಡೂ ಪಟ್ಟಣಗಳು ​​ನೇಪಾಳ-ಟಿಬೆಟ್ ಗಡಿಯ ಸಮೀಪದಲ್ಲಿವೆ.

ನುವಾಕೋಟ್‌ ಜಿಲ್ಲೆಯ ತ್ರಿಶೂಲಿ ಬಜಾರ್‌ ಮತ್ತು ಸಮೀಪದ ಪ್ರದೇಶಗಳಲ್ಲಿ ಅಪಾರ ನಾಶ ಸಂಭವಿಸಿದೆ. ತ್ರಿಶೂಲಿ ಬಜಾರ್‌ನಲ್ಲಿ ಸುಮಾರು 60 ಮನೆಗಳು ಹಾಗೂ ಎರಡು ದೊಡ್ಡ ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ಸಮೀಪದ ದೇವಿಘಾಟ್‌ನಲ್ಲೂ ಭಾರಿ ನಷ್ಟ ಉಂಟಾಗಿದೆ.

ಭಾರತದ 288 ಮಂದಿ ನಾಪತ್ತೆ

ದುರಂತದಲ್ಲಿ ಭಾರತದ 288 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ರಣದೀರ್ ಜೈಸ್ವಾಲ್ ಗುರುವಾರ ತಿಳಿಸಿದರು.

'ಪ್ರವಾಸಿಗರು ಮತ್ತು ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಯಾತ್ರಾರ್ಥಿಗಳು ಅಲ್ಲದೆ ನೇಪಾಳದ 'ತ್ರಿಶೂಲಿ ಒನ್' ಜಲವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ 73 ಕಾರ್ಮಿಕರು ನಾಪತ್ತೆಯಾದವರಲ್ಲಿ ಸೇರಿದ್ದಾರೆ' ಎಂದು ಮಾಹಿತಿ ನೀಡಿದರು.

'ಟಿಬೆಟ್‌ನಲ್ಲಿರುವ ಸುಮಾರು 200 ಭಾರತೀಯರು ನೆರವು ಕೋರಿದ್ದಾರೆ. ಹಠಾತ್ ಪ್ರವಾಹದಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ನೇಪಾಳಕ್ಕೆ ಸಾಧ್ಯವಿರುವ ಎಲ್ಲ ಬೆಂಬಲ ನೀಡುವುದನ್ನು ಭಾರತ ಮುಂದುವರಿಸಲಿದೆ' ಎಂದರು.

ತಮಿಳುನಾಡು, ಪುದುಚೆರಿಯ 85 ಮಂದಿ ನಾಪತ್ತೆ: ನೇಪಾಳಕ್ಕೆ ತೀರ್ಥಯಾತ್ರೆಗೆ ತೆರಳಿದ್ದ ತಮಿಳುನಾಡು, ಪುದುಚೆರಿಯ 85 ಮಂದಿ ನಾಪತ್ತೆಯಾಗಿದ್ದಾರೆ. 21 ಮಂದಿಯನ್ನು ರಕ್ಷಿಸಲಾಗಿದೆ. ತಮಿಳುನಾಡಿನ 103 ಹಾಗೂ ಪುದುಚೆರಿಯ ಮೂರು ಮಂದಿ ನೇಪಾಳಕ್ಕೆ ತೀರ್ಥಯಾತ್ರೆಗೆ ತೆರಳಿರುವುದನ್ನು ತಮಿಳುನಾಡು ಸರ್ಕಾರ ದೃಢಪಡಿಸಿದೆ.

ಪ್ರಮುಖ ಅಂಶಗಳು

* ಮಹಾರಾಷ್ಟ್ರದ 114 ಪ್ರವಾಸಿಗರು ನೇಪಾಳದಲ್ಲಿ ಸಿಲುಕಿದ್ದು, ಅವರಲ್ಲಿ 53 ಮಂದಿ ಸುರಕ್ಷಿತವಾಗಿದ್ದಾರೆ

* ಪಶ್ಚಿಮ ಬಂಗಾಳದ 32 ಮಂದಿ ನಾಪತ್ತೆಯಾಗಿರುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮಾಹಿತಿ ನೀಡಿದ್ದಾರೆ

* ಹಲವಾರು ದೇಶಗಳು ಹಾಗೂ ವಿಶ್ವಸಂಸ್ಥೆಯು ನೇಪಾಳಕ್ಕೆ ನೆರವಿನ ಹಸ್ತ ಚಾಚಿವೆ

* ವಿಶ್ವಸಂಸ್ಥೆಯು ಪರಿಹಾರ ಕಾರ್ಯಾಚರಣೆಗೆ ಆರಂಭಿಕ ಹಂತದಲ್ಲಿ 20 ಲಕ್ಷ ಡಾಲರ್ (ಅಂದಾಜು ₹19 ಕೋಟಿ) ಘೋಷಿಸಿದೆ

* ನಾಪತ್ತೆಯಾದವರಲ್ಲಿ ಅಮೆರಿಕದ 65, ಉಕ್ರೇನ್‌ನ 53 ಮತ್ತು ಮಲೇಷ್ಯಾದ 51 ಪ್ರವಾಸಿಗರು ಸೇರಿದ್ದಾರೆ 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries