ನವದೆಹಲಿ: ದೇಶದಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ ₹55-60ಕ್ಕೆ ಏರಿಕೆಯಾಗಿದ್ದು, ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ದೆಹಲಿಯಲ್ಲಿ ಆಗಸ್ಟ್ 27ರಿಂದ ಕೆ.ಜಿ.ಗೆ ₹35ರ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲಿದೆ.
ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರು ಈ ಮಾರಾಟ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿವಿಧ ಈರುಳ್ಳಿ ಉತ್ಪಾದಕ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸಿಟ್ಟಿರುವ 1.21 ಲಕ್ಷ ಟನ್ಗಳ ಬಫರ್ ದಾಸ್ತಾನಿನಿಂದ ಮಾರುಕಟ್ಟೆಗೆ ಬಿಡಲಿದೆ. ನಾಫೆಡ್, ಎನ್ಸಿಸಿಎಫ್ ಮತ್ತು ಕೇಂದ್ರೀಯ ಭಂಡಾರ್ ಮೂಲಕ ಚಿಲ್ಲರೆ ಮಾರಾಟ ನಡೆಯಲಿದೆ.
'ಕಂಡಾ ಎಕ್ಸ್ಪ್ರೆಸ್' ಮೂಲಕ ದೆಹಲಿಗೆ ಈರುಳ್ಳಿ
'ದೆಹಲಿಯಲ್ಲಿ ಗುರುವಾರದಿಂದ ಮಾರಾಟ ಆರಂಭಿಸುತ್ತೇವೆ. ವಾರಾಂತ್ಯದ ವೇಳೆಗೆ ಎನ್ಸಿಆರ್ ಪ್ರದೇಶಕ್ಕೂ ವಿಸ್ತರಿಸಲಾಗುವುದು' ಎಂದು ಎನ್ಸಿಸಿಎಫ್ ವ್ಯವಸ್ಥಾಪಕ ನಿರ್ದೇಶಕಿ ಅನೀಸ್ ಜೋಸೆಫ್ ಚಂದ್ರಾ ಹೇಳಿದ್ದಾರೆ. ಎನ್ಸಿಸಿಎಫ್ ಬಳಿ ಸುಮಾರು 62 ಸಾವಿರ ಟನ್ ಈರುಳ್ಳಿ ದಾಸ್ತಾನಿದೆ. ಮಹಾರಾಷ್ಟ್ರದ ನಾಸಿಕ್ನಿಂದ 400 ಟನ್ ಈರುಳ್ಳಿಯನ್ನು 'ಕಂಡಾ ಎಕ್ಸ್ಪ್ರೆಸ್' ಮೂಲಕ ದೆಹಲಿಗೆ ಕಳುಹಿಸಲಾಗಿದ್ದು, ಅದು ಗುರುವಾರ ತಲುಪುವ ನಿರೀಕ್ಷೆಯಿದೆ.
ಮೊದಲ ಹಂತದಲ್ಲಿ 100 ಕೇಂದ್ರೀಯ ಭಂಡಾರ್ ಮಳಿಗೆಗಳ ಮೂಲಕ ಈರುಳ್ಳಿ ಮಾರಾಟ ಮಾಡಲಾಗುವುದು. ಮದರ್ ಡೇರಿಯ 300 ಮಳಿಗೆಗಳಲ್ಲೂ ಮಾರಾಟ ನಡೆಸುವ ಕುರಿತು ಮಾತುಕತೆ ನಡೆಯುತ್ತಿದೆ. ಆರಂಭದಲ್ಲಿ 15 ಸಂಚಾರಿ ವಾಹನಗಳನ್ನು ನಿಯೋಜಿಸಲಾಗುತ್ತಿದ್ದು, ಬಳಿಕ ಅವುಗಳ ಸಂಖ್ಯೆಯನ್ನು 40ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ.
ದೆಹಲಿಯ ಜತೆಗೆ ಚಂಡೀಗಢ, ಲುಧಿಯಾನ, ವಾರಾಣಸಿ ಸೇರಿದಂತೆ ಇತರ ನಗರಗಳಿಗೂ ಈರುಳ್ಳಿ ಪೂರೈಕೆ ಮಾಡಲಾಗುತ್ತದೆ. ನಾಫೆಡ್ ಬಳಿ 55 ಸಾವಿರ ಟನ್ಗಿಂತ ಕಡಿಮೆ ಬಫರ್ ದಾಸ್ತಾನಿದ್ದು, ದೆಹಲಿ ಸೇರಿದಂತೆ ಕೊಚ್ಚಿ ಮತ್ತು ಗುವಾಹಟಿಯಲ್ಲೂ ಮಾರಾಟ ಮಾಡಲಾಗುತ್ತದೆ. ನಾಸಿಕ್ನಿಂದ ದೆಹಲಿಗೆ 800 ಟನ್ ಈರುಳ್ಳಿ ಹೊತ್ತ ಮೊದಲ ವಿಶೇಷ 'ಕಂಡಾ ಎಕ್ಸ್ಪ್ರೆಸ್' ರೈಲು ಈಗಾಗಲೇ ಹೊರಟಿದೆ. ಚೆನ್ನೈ, ಎರ್ನಾಕುಲಂ, ಮಧುರೈ ಮತ್ತು ಗುವಾಹಟಿಗೂ ಇದೇ ರೀತಿಯ ರೈಲುಗಳನ್ನು ಕಳುಹಿಸಲು ಯೋಜಿಸಲಾಗಿದೆ.

