ನವದೆಹಲಿ (PTI): 2026-27ರ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ಜುಲೈ 31ರವರೆಗೆ 5.9 ಕೋಟಿಗೂ ಹೆಚ್ಚು ತೆರಿಗೆದಾರರು ಆದಾಯ ತೆರಿಗೆ ವಿವರ (ಐಟಿಆರ್) ಸಲ್ಲಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ತಿಳಿಸಿದೆ.
2025-26ರ ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆದಾರರು ಐಟಿಆರ್ 1 ಮತ್ತು ಐಟಿಆರ್ 2 ಸಲ್ಲಿಸಬೇಕಿದ್ದು, ದಂಡರಹಿತವಾಗಿ ಐಟಿಆರ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನ ವಾಗಿತ್ತು.
ಕಳೆದ ವರ್ಷ ಸೆಪ್ಟೆಂಬರ್ 16ರವರೆಗೆ 7.3 ಕೋಟಿ ಐಟಿಆರ್ ಸಲ್ಲಿಕೆ ಆಗಿದ್ದವು.
ವಾರ್ಷಿಕ ₹50 ಲಕ್ಷದವರೆಗೆ ಒಟ್ಟು ಆದಾಯ ಹೊಂದಿದವರು, ಒಂದು ಮನೆ, ಬಡ್ಡಿ ಸೇರಿದಂತೆ ಇತರೆ ವರಮಾನ ಮತ್ತು ₹5 ಸಾವಿರದವರೆಗೆ ಕೃಷಿ ಆದಾಯ ಹೊಂದಿದವರು ಐಟಿಆರ್-1 ಸಲ್ಲಿಸಬೇಕಿದೆ. ಐಟಿಆರ್-2 ನಮೂನೆ ಯನ್ನು ಉದ್ದಿಮೆ ವಹಿವಾಟು ಅಥವಾ ವೃತ್ತಿಯಿಂದ ಆದಾಯ ಹೊಂದಿರದ ಹಾಗೂ ಬಂಡವಾಳ ವೃದ್ಧಿಯಿಂದ ಆದಾಯ ಪಡೆದಿರುವ ವ್ಯಕ್ತಿಗಳು, ಹಿಂದೂ ಅವಿಭಕ್ತ ಕುಟುಂಬಗಳು ಭರ್ತಿ ಮಾಡಬೇಕಾಗುತ್ತದೆ.

