ಅಹಮದಾಬಾದ್: ಸೂರತ್‌ನಲ್ಲಿ ದಾನವಾಗಿ ದೊರೆತ ಜೀವಂತ ಹೃದಯವನ್ನು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಅಹಮದಾಬಾದ್‌ಗೆ ಸಾಗಿಸಿ ಯಶಸ್ವಿಯಾಗಿ ರೋಗಿಗೆ ಕಸಿ ಮಾಡಲಾಗಿದೆ. ಭಾರತೀಯ ರೈಲ್ವೆ, ವೈದ್ಯಕೀಯ ತಂಡ ಮತ್ತು ಸ್ಥಳೀಯ ಆಡಳಿತದ ಸಮನ್ವಯದಿಂದ ಈ ಕಾರ್ಯಾಚರಣೆ ಯಶಸ್ವಿಯಾಗಿದೆ.
ವೈದ್ಯರು ಹೃದಯವನ್ನು ವಿಶೇಷ ಸಂರಕ್ಷಣಾ ಪೆಟ್ಟಿಗೆಯಲ್ಲಿ ಇರಿಸಿ ಸೂರತ್ ರೈಲು ನಿಲ್ದಾಣದಿಂದ ವಂದೇ ಭಾರತ್ ರೈಲಿನಲ್ಲಿ ಅಹಮದಾಬಾದ್‌ಗೆ ಕೊಂಡೊಯ್ದರು. ರೈಲು ತಲುಪುತ್ತಿದ್ದಂತೆಯೇ ಪೂರ್ವಸಿದ್ಧವಾಗಿದ್ದ ಗ್ರೀನ್ ಕಾರಿಡಾರ್ ಮೂಲಕ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನಿಸಲಾಯಿತು. ನಂತರ ರೋಗಿಗೆ ಯಶಸ್ವಿಯಾಗಿ ಹೃದಯ ಕಸಿ ಮಾಡಲಾಯಿತು.
ಈ ಕಾರ್ಯಾಚರಣೆಯಲ್ಲಿ ರೈಲ್ವೆ ಅಧಿಕಾರಿಗಳು, ರೈಲು ಸಿಬ್ಬಂದಿ, ವೈದ್ಯರು, ಪೊಲೀಸರು ಮತ್ತು ಸಂಚಾರ ವಿಭಾಗದ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದ್ದರು. ಸಮಯದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಹಂತಗಳಲ್ಲೂ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
'ಇದು ಭಾರತೀಯ ರೈಲ್ವೆಗೆ ಅತ್ಯಂತ ಹೆಮ್ಮೆಯ ಹಾಗೂ ತೃಪ್ತಿಯ ಕ್ಷಣ. ಒಂದು ಜೀವ ಉಳಿಸುವ ಕಾರ್ಯದಲ್ಲಿ ರೈಲ್ವೆ ಪಾತ್ರವಹಿಸಿರುವುದು ಸಂತಸದ ಸಂಗತಿ' ಎಂದು ಅಹಮದಾಬಾದ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ವೇದ ಪ್ರಕಾಶ್ ಹೇಳಿದ್ದಾರೆ.

