ನವದೆಹಲಿ: ತನ್ನ ಸ್ವಾತಂತ್ರ್ಯದಿನ ಭಾಷಣದಲ್ಲಿ 'ದಿಮಾಗಿ ನಕ್ಸಲರು (ಬೌದ್ಧಿಕ ನಕ್ಸಲರು)' ಪದವನ್ನು ಬಳಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಮುಖ್ಯ ವಕ್ತಾರ ಸೌರವ್ ದಾಸ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸರಕಾರವನ್ನು ಪ್ರಶ್ನಿಸಿದ್ದಕ್ಕಾಗಿ ಯುವಜನರಿಗೆ ನಕ್ಸಲರ ಹಣೆಪಟ್ಟಿಯನ್ನು ಕಟ್ಟಬಾರದು ಎಂದು ಅವರು ಹೇಳಿದ್ದಾರೆ.
ಶನಿವಾರ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೆಂಪುಕೋಟೆಯಿಂದ ಭಾಷಣ ಮಾಡಿದ ಮೋದಿ, ಸಶಸ್ತ್ರ ನಕ್ಸಲ್‌ವಾದವು ಅಂತ್ಯಗೊಳ್ಳುವ ಹಂತದಲ್ಲಿದ್ದರೂ,'ದಿಮಾಗಿ ನಕ್ಸಲ್' ಮನಸ್ಥಿತಿಯ ಜನರು ಹಿಂಸಾಚಾರ ಮತ್ತು ಅಶಾಂತಿಯನ್ನು ಸೃಷ್ಟಿಸಲು ಅವಕಾಶಗಳಿಗೆ ಕಾಯುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದರು.
ಇಂತಹ ಜನರನ್ನು ಗುರುತಿಸಿ ಪ್ರತ್ಯೇಕಿಸುವ ಅಗತ್ಯವಿದೆ ಮತ್ತು ಯುವಜನರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ ಎಂದೂ ಅವರು ಹೇಳಿದ್ದರು.
ಮೋದಿ ಹೇಳಿಕೆಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ದಾಸ್, ''ಪ್ರಧಾನಿಯವರೇ, ದಿಮಾಗಿ ನಕ್ಸಲ್ ಅಥವಾ ಏನೇ ಇರಲಿ, ಅದು ನಡೆಯುವುದಿಲ್ಲ. ಸುಶಿಕ್ಷಿತ ಯುವಜನರನ್ನು ನೀವು ಹೇಗೆ ಅಷ್ಟೊಂದು ಸುಲಭವಾಗಿ 'ನಕ್ಸಲರು' ಎಂದು ಬ್ರ್ಯಾಂಡ್ ಮಾಡುತ್ತೀರಿ? ನಿಮ್ಮ ಸರಕಾರವನ್ನು ಪ್ರಶ್ನಿಸಿದ್ದಕ್ಕಾಗಿಯೇ? ಇದು ಸಂಪೂರ್ಣ ದುರಹಂಕಾರ! ಅವರ ಸಮಸ್ಯೆಗಳನ್ನು ಪರಿಹರಿಸುವಲ್ಲಿನ ಸಂಪೂರ್ಣ ಅಸಾಮರ್ಥ್ಯ' ಎಂದು ಕುಟುಕಿದ್ದಾರೆ.
'ಗಂಟೆಗಳು ಬಾರಿಸುತ್ತಿವೆ. ಜನರು ಜಾಗೃತರಾಗುತ್ತಿದ್ದಾರೆ' ಎಂದೂ ಅವರು ಹೇಳಿದ್ದಾರೆ.
ಪ್ರತ್ಯೇಕ ಸ್ವಾತಂತ್ರ್ಯದಿನದ ಸಂದೇಶದಲ್ಲಿ ದಾಸ್, 'ಬಹುಶಃ 12 ವರ್ಷಗಳ ಬಳಿಕ ದೇಶವು ಸ್ವಾತಂತ್ರ್ಯದಿನವನ್ನು ಅದರ ನಿಜವಾದ ಅರ್ಥದಲ್ಲಿ ಆಚರಿಸುತ್ತಿದೆ, ಏಕೆಂದರೆ ನಮ್ಮೊಳಗಿನ ಏನೋ ಒಂದು ಕೊನೆಗೂ ಮುಕ್ತವಾಗಿದೆ: ಅದು ಭಯ. ಬಾಯಿ ಮುಚ್ಚಿಕೊಂಡಿರುವಂತೆ ಹೇಳಲ್ಪಟ್ಟ ಪೀಳಿಗೆಯೊಂದು ತನ್ನ ಧ್ವನಿಯನ್ನು ಕಂಡುಕೊಂಡಿದೆ ಹಾಗೂ ಏನೂ ಬದಲಾಗುವುದಿಲ್ಲ ಎಂದು ಹೇಳಲ್ಪಟ್ಟವರು ಮತ್ತೆ ನಂಬಲು ಆರಂಭಿಸಿದ್ದಾರೆ' ಎಂದು ಹೇಳಿದ್ದಾರೆ.
ಜಾಗೃತಿಯ ಯುಗ ಪ್ರಾರಂಭವಾಗಿದೆ. ಶಾಂತಿಯುತ ಪ್ರತಿಭಟನೆಯ ಯುಗ ಪ್ರಾರಂಭವಾಗಿದೆ ಎಂದು ಹೇಳಿರುವ ದಾಸ್, ಜನರು ಅಂತಿಮವಾಗಿ ಹಳೆಯ, ಭ್ರಷ್ಟ, ಅಸಮರ್ಥ ಮತ್ತು ದುರಹಂಕಾರಿಗಳನ್ನು ಕಿತ್ತೊಗೆಯುತ್ತಾರೆ ಎಂದಿದ್ದಾರೆ.
ಈ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ಜಂತರ್ ಮಂತರ್ ಹುಟ್ಟಿಕೊಳ್ಳುತ್ತಿದೆ. ಅಲ್ಲಿ ನಿರಾಶೆಗೊಂಡವರು ಪರಸ್ಪರರಲ್ಲಿ ಭರವಸೆಯನ್ನು ಕಂಡುಕೊಳ್ಳುತ್ತಾರೆ ಮತ್ತು ಶಕ್ತಿಹೀನರೆಂದು ಭಾವಿಸಿದವರು ಒಟ್ಟಿಗೆ ನಿಲ್ಲುವ ಶಕ್ತಿಯನ್ನು ಕಂಡುಕೊಳ್ಳುತ್ತಾರೆ ಎಂದು ದಾಸ್ ಹೇಳಿದ್ದಾರೆ.
'ನಿಮ್ಮ ಜೆನ್-ಝೀ ವಿರುದ್ಧ ನಮ್ಮ ಜೆನ್-ಝೀ' ಎಂದು ಹೇಳುವ ಮೂಲಕ ಅಧಿಕಾರದಲ್ಲಿರುವವರು ಜೆನ್-ಝೀ ಮತ್ತು ಯುವಜನರನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ದಾಸ್, ಏಕೆಂದರೆ ಇತಿಹಾಸದಲ್ಲಿ ಏನಿದೆ ಎನ್ನುವುದು ಅವರಿಗೆ ತಿಳಿದಿದೆ: ವಿಭಜನೆಯಾಗಲು ನಿರಾಕರಿಸುವ ಜನರಿಗಿಂತ ಹೆಚ್ಚು ಶಕ್ತಿಶಾಲಿ ಬೇರೇನೂ ಇಲ್ಲ' ಎಂದು ಹೇಳಿದ್ದಾರೆ.
'ಅವರು ವಿಭಜಿಸುತ್ತಾರೆ. ನಾವು ಒಂದುಗೂಡಿಸುತ್ತೇವೆ. ಅವರು ಭಯವನ್ನು ಹರಡುತ್ತಾರೆ. ನಾವು ಧೈರ್ಯವನ್ನು ಹರಡುತ್ತೇವೆ. ಮನಸ್ಸು ಈಗ ಭಯಮುಕ್ತವಾಗಿದೆ ಮತ್ತು ಇನ್ನು ಹಿಂದಿರುಗುವ ಪ್ರಶ್ನೆಯೇ ಇಲ್ಲ 'ಎಂದು ದಾಸ್ ಹೇಳಿದ್ದಾರೆ.

