ಮುಂಬೈ: ಪುಣೆಯಲ್ಲಿ ನಡೆಯಲಿರುವ ರಾಹುಲ್ ಗಾಂಧಿ ಅವರ 'ಛಾತ್ರೋಂ ಕಿ ಗೂಂಜ್' ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಕಾಂಗ್ರೆಸ್, ಸಾಮಾಜಿಕ ಜಾಲತಾಣಗಳ ಇನ್ಫ್ಲುಯೆನ್ಸರ್ಗಳಿಗೆ ಹಣ ನೀಡಿದೆ ಎಂದ ಬಿಜೆಪಿ ಆರೋಪಿಸಿದೆ.
ಈ ಕಾರ್ಯಕ್ರಮಕ್ಕಾಗಿ ಜನರನ್ನು ಕರೆತರಲು ಕಾಂಗ್ರೆಸ್, ಒಬ್ಬ ಇನ್ಫ್ಲುಯೆನ್ಸರ್ಗೆ ₹35,000 ವರೆಗೆ ಪಾವತಿಸುವ ಮೂಲಕ ಸುಮಾರು ₹10 ಕೋಟಿಯಷ್ಟು ವೆಚ್ಚ ಮಾಡಿದೆ.
ಇದು 'ಛಾತ್ರೋಂ ಕಿ ಗೂಂಜ್' ಅಲ್ಲ, ಬದಲಿಗೆ 'ಪೈಸೆ ಕಿ ಗೂಂಜ್' ಎಂದು ಬಿಜೆಪಿ ವಕ್ತಾರ ನವನಾಥ್ ಬಾನ್ ಲೇವಡಿ ಮಾಡಿದ್ದಾರೆ.
ಪುಣೆ ಕಾರ್ಯಕ್ರಮವನ್ನು ಪ್ರಚಾರ ಮಾಡಲು, ಪ್ರಯಾಣ ವೆಚ್ಚವನ್ನು ಭರಿಸಲು ಮತ್ತು ಆನ್ಲೈನ್ನಲ್ಲಿ ಕಾರ್ಯಕ್ರಮದ ಪ್ರಚಾರ ಮಾಡಲು ಸಾಮಾಜಿಕ ಜಾಲತಾಣಗಳ ಇನ್ಫ್ಲುಯೆನ್ಸರ್ಗಳಿಗೆ ₹30,000 ದಿಂದ ₹35,000 ವರೆಗೆ ಆಫರ್ ನೀಡಲಾಗುತ್ತಿರುವ ವಿಡಿಯೊಗಳು ಹೊರಬಂದಿವೆ. ಕಾಂಗ್ರೆಸ್ ಹಣ ಕೊಟ್ಟು ಜನರನ್ನು ಸೇರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ರಾಹುಲ್ ಗಾಂಧಿ ಅವರಿಗಿರುವ ಜೆನ್-ಝೀ ಬೆಂಬಲವನ್ನು ಕಂಡು ಬಿಜೆಪಿ ಹೆದರಿದೆ ಎಂದು ತಿರುಗೇಟು ನೀಡಿದೆ.

