ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ ಕಲಾಪಕ್ಕೆ ಗೈರಾಗಿರುವ ವಿಚಾರವಾಗಿ ಸರ್ಕಾರ ಮತ್ತು ವಿರೋಧ ಪಕ್ಷಗಳು ಶುಕ್ರವಾರ ಪರಸ್ಪರ ಜಟಾಪಟಿ ನಡೆಸಿದವು.
ಜುಲೈ 20ರಂದು ಪ್ರತಿಭಟನನಿರತ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಮಾಡಿದ ಬಗ್ಗೆ ಅಮಿತ್ ಶಾ ಅವರು ಸ್ಪಷ್ಟನೆ ನೀಡಬೇಕು ಎಂದು ವಿರೋಧ ಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಟ್ಟುಹಿಡಿದವು.
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, 'ಸಭಾಪತಿ ಸಿ.ಪಿ.ರಾಧಾಕೃಷ್ಣನ್ ಅವರ ಮನವಿಯನ್ನು ಸರ್ಕಾರ ನಿರ್ಲಕ್ಷಿಸಿದೆ. ಗೃಹ ಸಚಿವರು ಮತ್ತು ಪ್ರಧಾನಮಂತ್ರಿ ಅವರು ಸಂಸತ್ತಿಗೆ ಬಂದು ಹೇಳಿಕೆ ನೀಡಬೇಕು. ಇದು ಸಂಸತ್ತಿಗೆ ಮಾಡುತ್ತಿರುವ ಅವಮಾನ' ಎಂದು ಹೇಳಿದರು.
ಈ ಸಂದರ್ಭದಲ್ಲಿ ರಿಜಿಜು ಅವರು, 'ಖರ್ಗೆ ಅವರು ಸದನದ ದಾರಿ ತಪ್ಪಿಸುತ್ತಿದ್ದಾರೆ. ಸಭಾಪತಿ ಅಂಥ ಯಾವುದೇ ನಿರ್ದೇಶನವನ್ನು ನೀಡಿಲ್ಲ' ಎಂದು ಹೇಳಿದರು.
'ಗೃಹ ಸಚಿವರು ಬೆಳಿಗ್ಗೆಯಿಂದ ತಡರಾತ್ರಿವರೆಗೂ ಸಂಸತ್ತಿನಲ್ಲಿಯೇ ಇರುತ್ತಾರೆ. ಆದರೆ ವಿರೋಧ ಪಕ್ಷಗಳ ಸಂಸದರು ಕೂಗಾಡುತ್ತಾ ಸಂಸತ್ ಕಲಾಪದಿಂದ ಹೊರಹೋಗುತ್ತಾರೆ. ಗೃಹ ಸಚಿವರು ಪ್ರತಿಕ್ರಿಯಿಸಿದರೆ ನಿಮಗೆ ಜೀರ್ಣಿಸಿಕೊಳ್ಳಲು ಆಗುವುದಿಲ್ಲ' ಎಂದು ಹೇಳಿದರು. ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆ ಬಳಿಕ ಸಭಾಪತಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.
ಲೋಕಸಭೆಯಲ್ಲಿಯೂ ಇದೇ ವಿಚಾರವಾಗಿ ಪ್ರತಿಭಟನೆ ಮುಂದುವರಿದ ಕಾರಣ ಒಂದು ದಿನದ ಮಟ್ಟಿಗೆ ಕಲಾಪವನ್ನು ಮುಂದೂಡಲಾಯಿತು.
ರಿಜಿಜು ಅವರು, 'ಅಮಿತ್ ಶಾ ಅವರ ಹೆಸರು ಕೇಳಿದರೆ ಭಯೋತ್ಪಾದಕರಲ್ಲಿ ನಡುಕ ಹುಟ್ಟುತ್ತದೆ. ಅವರು ಸಂಸತ್ತಿನಲ್ಲಿ ಮಾತನಾಡಿದರೆ ಬಿಜೆಪಿ ವಿರೋಧಿಗಳಿಗೆ ಜೀರ್ಣಿಸಿಕೊಳ್ಳಲು ಆಗುವುದಿಲ್ಲ' ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು.
'ಯಾವ ಸಚಿವರು ಸದನಕ್ಕೆ ಬರಬೇಕು ಮತ್ತು ಯಾರು ಪ್ರತಿಕ್ರಿಯೆ ನೀಡಬೇಕು ಎನ್ನುವುದನ್ನು ವಿರೋಧ ಪಕ್ಷಗಳು ನಿರ್ಧರಿಸುವಂತಿಲ್ಲ. ಅದನ್ನು ಸರ್ಕಾರ ಮತ್ತು ಸಭಾಪತಿಗಳು ನಿರ್ಧರಿಸಬೇಕು' ಎಂದು ಹೇಳಿದರು.

