ರಾಯ್ಪುರ: ಛತ್ತೀಸಗಢ ಪೊಲೀಸ್ ನೇಮಕ ಪ್ರಕ್ರಿಯೆಯ ಮೆರಿಟ್ ಲಿಸ್ಟ್ನಲ್ಲಿ 'ನ್ಯೂಸ್' (News), 'ಸ್ಪೇಸ್ ರಾಣಿ' (Space Rani), 'ಹೇ ರಾಮ್' (He Ram) ಹಾಗೂ 'ಭಕ್ತ ಪ್ರಹ್ಲಾದ' (Bhakt Prahlad) ಎಂಬಿತ್ಯಾದಿ ವಿಶಿಷ್ಟ ಹೆಸರುಗಳು ಕಾಣಿಸಿಕೊಂಡಿವೆ. ಈ ಪಟ್ಟಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ನೆಟ್ಟಿಗರು ಟೀಕಾಪ್ರಹಾರ ನಡೆಸುತ್ತಿದ್ದಾರೆ.
341 ಹುದ್ದೆಗಳಿಗೆ ಜುಲೈ 12ರಂದು ನಡೆದಿದ್ದ ಪರೀಕ್ಷೆಯ ಫಲಿತಾಂಶ ಆಗಸ್ಟ್ 4ರಂದು ಪ್ರಕಟವಾಗಿದ್ದು, ಅಂತಿಮ ಹಂತಕ್ಕೆ 7,301 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ಆದರೆ, ವಿಶಿಷ್ಟ ಹೆಸರುಗಳಿರುವ ಪಟ್ಟಿ ಹರಿದಾಡುತ್ತಿದ್ದಂತೆ ನೇಮಕ ಪ್ರಕ್ರಿಯೆಯ ವಿಶ್ವಾಸಾರ್ಹತೆ ಪ್ರಶ್ನಿಸಿರುವ ಕಾಂಗ್ರೆಸ್, ಅವ್ಯವಹಾರದ ಆರೋಪ ಮಾಡಿದೆ. ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲೋಪವಾಗಿಲ್ಲ ಎಂದ ಆಯೋಗ
ಆದರೆ, ಛತ್ತೀಸ್ಗಢ ಲೋಕಸೇವಾ ಆಯೋಗ (CGPSC) ಆರೋಪಗಳನ್ನು ತಳ್ಳಿಹಾಕಿದೆ. ಮೆರಿಟ್ ಲಿಸ್ಟ್ನಲ್ಲಿರುವ ಎಲ್ಲ ಹೆಸರುಗಳೂ ನೈಜವಾಗಿವೆ. ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ಪೂರಕ ದಾಖಲೆಗಳಲ್ಲಿ ನಮೂದಿಸಿರುವ ವಿವರಗಳಿಗೆ ಹೆಸರುಗಳು ಹೊಂದಿಕೆಯಾಗುತ್ತಿವೆ ಎಂದು ಸ್ಪಷ್ಟಪಡಿಸಿದೆ.
ಅಭ್ಯರ್ಥಿಗಳು ಪ್ರವೇಶ ಪತ್ರ ಮತ್ತು ಅಧಿಕೃತ ದಾಖಲೆಗಳಲ್ಲಿ ಉಲ್ಲೇಖಿಸಿರುವ ಹೆಸರುಗಳೊಂದಿಗೆ ದಾಖಲೆಗಳ ಪರಿಶೀಲನೆ, ದೈಹಿಕ ಪರೀಕ್ಷೆ ಮತ್ತು ಪ್ರಾಥಮಿಕ ಪರೀಕ್ಷೆಗೆ ಹಾಜರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳನ್ನು ಸಾರ್ವಜನಿಕರು ನಂಬಬಾರದು. ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾದ ಮಾಹಿತಿಯನ್ನು ಮಾತ್ರವೇ ಪರಿಗಣಿಸಬೇಕು ಎಂದು ಆಯೋಗದ ಮನವಿ ಮಾಡಿದೆ.
ಹೆಸರು ಇರುವುದೇ ಹಾಗೆ ಎಂದ ಅಭ್ಯರ್ಥಿಗಳು
ವಿಚಿತ್ರವೆಂದರೆ, ಅಭ್ಯರ್ಥಿಗಳೂ ತಮ್ಮ ಹೆಸರುಗಳನ್ನು ಸಮರ್ಥಿಸಿಕೊಂಡಿದ್ದಾರೆ. ನ್ಯೂಸ್ ಕುಮಾರ್ ಪ್ರಧಾನ್ ಎಂಬವರು, ತಮ್ಮ ಆಧಾರ್, ಶೈಕ್ಷಣಿಕ ದಾಖಲೆಗಳಲ್ಲಿ 'News' ಎಂದು ಮಾತ್ರವೇ ಉಲ್ಲೇಖವಾಗಿದೆ ಎಂದು ತಿಳಿಸಿದ್ದಾರೆ. ಹಾಗೆಯೇ, ಸತ್ಯ ಏನೆಂದು ಪರಿಶೀಲಿಸದೆ ಜನರು ನನ್ನ ಹೆಸರಿನ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಪ್ರಶ್ನೆಗಳನ್ನು ಮಾಡುತ್ತಿದ್ದಾರೆ ಎಂದೂ ಹೇಳಿದ್ದಾರೆ.
ಅಧಿಕೃತ ದಾಖಲೆಗಳಲ್ಲಿ ಇರುವಂತೆಯೇ ಅರ್ಜಿ ಭರ್ತಿ ಮಾಡಿರುವುದಾಗಿ 'He Ram' ಎಂಬವರೂ ಹೇಳಿಕೊಂಡಿದ್ದಾರೆ.
ಎಲ್ಲ ದಾಖಲೆಗಳಲ್ಲೂ ತಮ್ಮ ಹೆಸರು ಇದುವುದೇ ಹಾಗೆ. ಅನಗತ್ಯ ಗೊಂದಲ ಸೃಷ್ಟಿಸಬೇಡಿ ಎಂದು 'Bhakt Prahlad' ಮನವಿ ಮಾಡಿದ್ದಾರೆ.

