ಕಾಸರಗೋಡು: ವಿಶ್ವ ಸ್ತನ್ಯಪಾನ ವಾರಾಚರಣೆಯ ಕಾಸರಗೋಡು ಜಿಲ್ಲಾ ಮಟ್ಟದ ಕಾರ್ಯಕ್ರಮ ತ್ರಿಕ್ಕರಿಪುರ ಟೌನ್‍ಹಾಲ್ ಸಭಾಂಗಣದಲ್ಲಿ ಜರುಗಿತು. ತ್ರಿಕ್ಕರಿಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಂ. ರಾಜೀಶ್ ಬಾಬು ಸಮಾರಂಭ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಎ.ಕೆ. ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಎಂ. ಮನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ಸಂತೋಷ್ ಬಿ. ಅವರು ವಾರಾಚರಣೆಯ ಸಂದೇಶ ನೀಡಿದರು.
ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಸದಸ್ಯೆ ಎಂ.ಟಿ.ಪಿ. ಶಾಹಿನಾ, ಗ್ರಾಪಂ ಸದಸ್ಯರಾದ ಯು.ಪಿ. ಫಯೀಸ್, ಸಿ. ನೂರೈನಿ, ಮತ್ತು ಕೆ. ಸುನಿತಾ, ತಾಲೂಕಾಸ್ಪತ್ರೆ ವೈದ್ಯಾಧಿಕಾರಿ ಡಾ. ಕೆ.ಟಿ ರಂಜಿತಾ, ಜಿಲ್ಲಾ ಎಂಸಿಎಚ್ ಅಧಿಕಾರಿ ಸ್ಟೆಲ್ಲಾ ಜೋಸೆಫ್ ಉಪಸ್ಥಿತರಿದ್ದರು. 'ಸ್ತನ್ಯಪಾನ-ಜೀವನಕ್ಕೆ ಸುಸ್ಥಿರ ಆರಂಭ'ಎಂಬ ಧ್ಯೇಯವಾಕ್ಯದೊಂದಿಗೆ ಆ. 1ರಿಂದ 7ರ ವರೆಗೆ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿದೆ.
ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಕ ಪಿ.ವಿ. ಪ್ರಕಾಶನ್ ವಂದಿಸಿದರು. ನಂತರ ನಡೆದ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ, ಉಡುಂಬುತಲ ಕುಟುಂಬ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಹಾಗೂ ವೈದ್ಯಾಧಿಕಾರಿ ಡಾ. ಕೆ.ವಿ. ಚೈತನ್ಯ ಅವರು ಎದೆಹಾಲಿನ ಮಹತ್ವದ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕ ಆರೋಗ್ಯ ಶುಶ್ರೂಷಕಿ ಪಿ.ಜೆ. ಜಿನ್ಸಿ ಅವರ ನೇತೃತ್ವದಲ್ಲಿ ನೇರ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಕಾರ್ಯಾಗಾರದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಗರ್ಭಿಣಿಯರು ಮತ್ತು ಎದೆಹಾಲುಣಿಸುವ ತಾಯಂದಿರು ಭಾಗವಹಿಸಿದ್ದರು. ಕಾಸರಗೋಡು ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಐಎಪಿ ಪರಿಯಾರಂ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿತ್ತು.


