ಕುಂಬಳೆ: ಕುಖ್ಯಾತ ಕಳವು ಆರೋಪಿಯಾದ ನೆಲ್ಲಿಕಟ್ಟೆ ನಿವಾಸಿ ಉಮರ್ ಫಾರೂಕ್ (46)ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಕಾಞಂಗಾಡಿನಿಂದ ಬಂಧಿಸಿದ್ದಾರೆ. ಕಾಞಂಗಾಡಿನ ಬಾರ್ ಒಂದರ ಎದುರು ನಿಂತಿದ್ದ ಸಂದರ್ಭ ಕಾರ್ಯಚರಣೆಗೆ ಮುಂದಾಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಲು ಯತ್ನಿಸಿದ ಈತನನ್ನು ಹಿಂಬಾಲಿಸಿ ಸೆರೆಹಿಡಿಯಲಾಗಿದೆ.
ಈತ ಕಾಸರಗೋಡು, ದ.ಕ ಜಿಲ್ಲೆಯ ವಿವಿಧ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಲ್ಲಿಸಿದ ವಾಹನಗಳಿಂದ ಬ್ಯಾಟರಿ ಕಳವುಗೈಯುವ ತಂಡದ ಮುಖ್ಯ ಸೂತ್ರಧಾರನಾಗಿದ್ದು, ಕಳೆದ ತಿಂಗಳು 29ರಂದು ಮಾವಿನಕಟ್ಟೆಯ ಕ್ಷೇತ್ರದಿಂದ ಕಾಣಿಕೆ ಹುಂಡಿ ಕಳವುಗೈದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು. ಹಲವು ತಿಂಗಳಿಂದ ಕರ್ನಾಟಕ ಪೆÇಲೀಸರು ಹಾಗೂ ಕೇರಳ ಪೆÇಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದು, ಹಗಲು ಹೊತ್ತಿನಲ್ಲಿ ಅವಿತುಕೊಳ್ಳುವ ಈತ ರಾತ್ರಿ ವೇಳೆ ಕಳವು ನಡೆಸುತ್ತಿದ್ದನು.
ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಳ್ಳೇರಿಯ ಪಳ್ಳ ನಿವಾಸಿ ಸಾಬಿತ್ ಎಂಬಾತನೊಂದಿಗೆ ಸೇರಿ ಬಾಡಿಗೆಗೆ ಪಡೆದಿದ್ದ ಕಾರಿನಲ್ಲಿ ಮಾವಿನಕಟ್ಟೆಯ ಕ್ಷೇತ್ರವೊಂದರ ಕಾಣಿಕೆ ಹುಂಡಿ ಕಳವುನಡೆಸಿದ್ದು, ಅಲ್ಲಿಂದ ಅದೇ ವಾಹನದಲ್ಲಿ ಮರಳಿದ ಆರೋಪಿ ಮುಳ್ಳೇರಿಯದ ಮನೆಯೊಂದರಿಂದ ಎರಡು ಕಿಂಟಾಲ್ ಅಡಕೆಯನ್ನು ಕಳವು ನಡೆಸಿದ್ದನು.
ತನ್ನ ಚಲನವಲನದ ಬಗ್ಗೆ ಪೊಲೀಸರು ನಿಗಾಯಿರಿಸದಂತೆ ಈತ ಸ್ವಂತವಾಗಿ ಮೊಬೈಲ್ ಬಳಸದೆ, ಅಗತ್ಯಕ್ಕಾಗಿ ಇತರರಿಂದ ಪಡೆದು ಮನೆಯವರನ್ನು ಸಂಪರ್ಕಿಸುತ್ತಿದ್ದನು.
ಇನ್ಸ್‍ಪೆಕ್ಟರ್ ಅನೂಪ್ ಕೃಷ್ಣನ್, ಎಸ್.ಐ ಅಭಿಜಿತ್, ಎಎಸ್‍ಐ ಪ್ರಸಾದ್ ಪುಲ್ಲೂರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.



