ನವದೆಹಲಿ: ಎಥೆನಾಲ್ ಮಿಶ್ರಿತ ಇ20 ಪೆಟ್ರೋಲ್ ಬಳಕೆಯಿಂದಾಗಿ ವಾಹನಗಳ ದಕ್ಷತೆಯ (ಮೈಲೇಜ್) ಕಡಿಮೆ ಆಗುತ್ತಿದ್ದು, ಜನರ ಜೇಬಿನಿಂದ ನೇರವಾಗಿ ಹಣವನ್ನು ಕಸಿದುಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಇ20 ಪೆಟ್ರೋಲ್ ಬಳಕೆ ಕುರಿತು 'ಎಕ್ಸ್'ನಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, 'ಸಹೋದರ, ಸಹೋದರಿಯರೇ..., ವ್ಯವಸ್ಥೆಯಲ್ಲಿ ಎಷ್ಟು ಭ್ರಷ್ಟಾಚಾರವಿದೆಯೆಂದರೆ ನಾವು ಆದ್ಯತೆ ನೀಡಬೇಕಾದ ವಿಷಯಗಳ ದೊಡ್ಡ ಸಾಲೇ ಇದೆ' ಎಂದು ಹೇಳಿಕೊಂಡಿದ್ದಾರೆ.
'ಖಂಡಿತವಾಗಿಯೂ, ಈ ವಿಚಾರವಾಗಿ (ಇ20 ಪೆಟ್ರೋಲ್) ನಾವು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಿದ್ದೇವೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗಿ ಕಾರು, ಬೈಕ್ಗಳು ಹಾನಿಗೊಳಗಾಗುತ್ತಿವೆ. ಇದು ಜನರ ಬದುಕನ್ನೇ ದುಸ್ತರಗೊಳಿಸುತ್ತಿದೆ. ಅಷ್ಟೇ ಅಲ್ಲ, ಜನರ ಜೇಬಿನಿಂದ ನೇರವಾಗಿ ಹಣವನ್ನು ಕಸಿದುಕೊಳ್ಳಲಾಗುತ್ತಿದೆ' ಎಂದು ಅವರು ಗುಡುಗಿದ್ದಾರೆ.
ಈಚೆಗೆ 'ಇ20 ಪೆಟ್ರೋಲ್' ಮಾರಾಟ ವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪುಮಾಹಿತಿ ಹರಡಲಾಗುತ್ತಿದೆ ಎಂದು ಹೇಳಿದ್ದ ಕೇಂದ್ರ ಸರ್ಕಾರವು, ಇದರ ಬಗ್ಗೆ ಹತ್ತು ಅಂಶಗಳ ಸ್ಪಷ್ಟನೆಯನ್ನು ನೀಡಿತ್ತು.
ವೈಜ್ಞಾನಿಕ ಅಧ್ಯಯನ, ಅಂತರರಾಷ್ಟ್ರೀಯ ಮಟ್ಟದಲ್ಲಿನ ಅನುಭವ ಹಾಗೂ ನಿಯಮಗಳ ಅನ್ವಯ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಹೇಳಿತ್ತು.
ಒಂದು ಲೀಟರ್ ಎಥೆನಾಲ್ ಉತ್ಪಾದಿಸಲು 10 ಸಾವಿರ ಲೀಟರ್ ನೀರು ಬೇಕು ಎಂಬ ಮಾತುಗಳು ಸುಳ್ಳು, ದೇಶದ ಆಹಾರ ಭದ್ರತೆಗೆ ಅಗತ್ಯವಿರುವ ಅಕ್ಕಿಯನ್ನು ತೆಗೆದಿರಿಸಿದ ನಂತರ ಉಳಿಯುವ ಹೆಚ್ಚುವರಿ ಅಕ್ಕಿಯನ್ನು ಮಾತ್ರ ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿತ್ತು.
ಇದರ ಬೆನ್ನಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಹೊಂದಿರುವ ಪೆಟ್ರೋಲ್ ಮೇಲೆ ವಿಧಿಸಲಾಗುತ್ತಿದ್ದ ಎಕ್ಸೈಸ್ ಸುಂಕವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಇಂಧನ ಮಿಶ್ರಣದ ಪ್ರಕ್ರಿಯೆಯ ಮೇಲೆ ಎರಡು ಬಾರಿ ತೆರಿಗೆ ವಿಧಿಸುವ ಸ್ಥಿತಿ ಇರಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿತ್ತು.

