ನವದೆಹಲಿ: ಪರೀಕ್ಷೆಯ ವೇಳೆ ಒಎಂಆರ್ ಶೀಟ್ಗಳಲ್ಲಿ ಗುರುತಿಸಿದ ಉತ್ತರಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಅಪ್ಲೋಡ್ ಮಾಡಿದ ಒಎಂಆರ್ ಶೀಟ್ನಲ್ಲಿ ವ್ಯತ್ಯಾಸಗಳಿವೆ ಎಂದು ಆರೋಪಿಸಿ ಆರು ನೀಟ್-ಯುಜಿ ಅಭ್ಯರ್ಥಿಗಳು ಮಂಗಳವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗುವ ಮೊದಲು ಈ ಅರ್ಜಿ ಕುರಿತು ತುರ್ತು ವಿಚಾರಣೆ ನಡೆಸಬೇಕೆಂದು ಅಭ್ಯರ್ಥಿಗಳು ಕೋರಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರ ಪೀಠವು ಅರ್ಜಿ ವಿಚಾರಣೆ ನಡೆಸಲಿದೆ.
'ಈ ಪ್ರಕರಣವು 600 ಮತ್ತು 650ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಆರು ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದಾಗಿದೆ. ಪರೀಕ್ಷೆಯ ವೇಳೆ ತಾವು ಗುರುತಿಸಿದ್ದ ಉತ್ತರಗಳಿಗೂ, ಎನ್ಟಿಎ ಅಪ್ಲೋಡ್ ಮಾಡಿರುವ ಒಎಂಆರ್ ಶೀಟ್ಗಳಿಗೂ ವ್ಯತ್ಯಾಸವಿದೆ' ಎಂದು ವಿದ್ಯಾರ್ಥಿಗಳು ಪ್ರತಿಪಾದಿಸಿರುವುದಾಗಿ ವಕೀಲರು ಮಾಹಿತಿ ನೀಡಿದ್ದಾರೆ.
ಇದೇ ವಿಚಾರವಾಗಿ ವಿದ್ಯಾರ್ಥಿಗಳು ಎನ್ಟಿಎಗೆ ಇಮೇಲ್ ಕಳುಹಿಸಿದ್ದಾರೆ ಮತ್ತು ಕಚೇರಿಗೂ ಭೇಟಿ ನೀಡಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ ಎಂದೂ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮೇ 3ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಬಳಿಕ ಜೂನ್ 21ರಂದು ಮರು ಪರೀಕ್ಷೆ ನಡೆಸಲಾಗಿತ್ತು.

